ಗುರುವಾರ, ಮೇ 12

ಅಸಂತುಷ್ಟ ಗುಪ್ತ ಕಾಮ -ಒಂದು ವಿವೇಚನೆ

ಆಕೆ ಒಬ್ಬ ಸದ್ಗೃಹಿಣಿ. ಸೂಕ್ಷ್ಮ ಮನಸ್ಸಿನ ಬುದ್ದಿವಂತೆ. ತಾವು, ತಮ್ಮ ಮಗ ಮತ್ತು ತಮ್ಮ ಪತಿ ಎಂದರೆ ಸುಂದರ ಪ್ರಪಂಚ. ಬದಲಾಗುತ್ತಿರುವ ದಿನಗಳ ಶೋಷಣೆಯಿಂದ ಬದುಕಿನ ಬಗ್ಗೆ ನಿಜಕ್ಕೂ ಭಯ ಪಡುತ್ತಾರೆ. ಹೈಸ್ಕೂಲು ಓದುತ್ತಿರುವ ಅವರ ಮಗನ ಸ್ನೇಹಿತರು " ಹಾಯ್ ಆಂಟಿ " ಎಂದು ಕರೆಯುವ ಶ್ಯಲಿಯಲ್ಲಿಯೇ ಆ ಹುಡುಗರ ಮನಸ್ಸಿನಲ್ಲಿ ಏನಿದೆ ಎಂದು ಅವರಿಗೆ ತಿಳಿದಿದೆ. ತಾವು ಕೆಲಸ ಮಾಡಿದ ಹಳೆಯ ಕಂಪನಿಯ ಆಫೀಸ್ ಬಾಯ್ ರಸ್ತೆಯಲ್ಲಿ ಅಕಸ್ಮಾತ್ ಸಿಕ್ಕು ತಮ್ಮ ಮೊಬೈಲ್ ನಂಬರ್ ಕೇಳಿದಾಗ ಕೊಟ್ಟರೆ ಆ ಹುಡುಗನೂ ಕೂಡ ಬೇರೆ ಬೇರೆ ನಂಬರ್ನಿಂದ ಕರೆ ಮಾಡಿ ತಲೆ ಕೆಡಿಸುತ್ತಾನೆ. ಅವರು ಬೇಸರ ಪಡುತ್ತಾರೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂಬುದು ಅವರ ಮನಸ್ಸಿಗೆ ನೋವುಂಟು ಮಾಡಿದೆ. ಏನಾಗುತ್ತಿದೆ ಈ ಪ್ರಪಂಚ ?


ಮೆಜೆಸ್ಟಿಕ್ ಬಸ್ ಸ್ಟ್ಯಾಂಡಿನಿಂದ ಅಂಡರ್ ಪಾಸ್ ದಾಟಿ ರೈಲು ನಿಲ್ದಾಣದ ಕಡೆಗೆ ನಡೆದಾಗ ಅಲ್ಲೊಬ್ಬ ತಾಯಿಯ ವಯಸ್ಸಿನ ಹೆಣ್ಣು ಮತ್ತು ಮಗನ ವಯಸ್ಸಿನ ಗಂಡು. ಅಲ್ಲಿ ನಡೆಯುತ್ತಿರುವುದು ಮೈ ಮಾರಿಕೊಳ್ಳುವ ಹೆಣ್ಣಿನ ವ್ಯಾಪಾರ ಕುದುರಿಸುತ್ತಿರುವ ದೃಶ್ಯ. ಆ ಹುಡುಗ ಕೆಟ್ಟ ಭಾಷೆಯಲ್ಲಿ ಆ ಹೆಣ್ಣನ್ನು ಒಂದು ಅತೀ ಕೆಟ್ಟ ಪದದಿಂದ ಮಾತನಾಡಿಸುತ್ತಾನೆ. ಅದಕ್ಕೆ ಅವಳು ಆ ಪದ ಮಾತ್ರ ಬಳಸಬೇಡ ನನ್ನ ಗಂಡ ಇನ್ನೂ ಬದುಕಿದ್ದಾನೆ ಅನ್ನುತ್ತಾಳೆ. ಅಜ್ಜಿಯ ವಯಸ್ಸಿನ ಮುದುಕಿಯೊಬ್ಬಳು ಮಧ್ಯೆ ಸಮಾಧಾನ ಮಾಡುವವಳಂತೆ ಬಂದು ವ್ಯಾಪಾರ ಕುದುರಿಸಲು ನೆರವಾಗುತ್ತಾಳೆ. ಅಲ್ಲಿ ಮಗಳು, ತಾಯಿ, ಅಜ್ಜಿ ....ಎಲ್ಲರೂ ಒಂದೇ ಕುಲ ಕಸುಬನ್ನು ನಡೆಸುವವರೇ....
ಆಗಾಗ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಒಬ್ಬ ಮನುಷ್ಯ . ತನ್ನ ಹೆಂಡತಿ ಗರ್ಭಿಣಿಯಾದ ಮೇಲೆ ಮನೆಯ ಸಹಾಯಕ್ಕೆ ಹದಿನಾಲ್ಕು ವರ್ಷದ ಕೊಡಗಿನ ಹುಡುಗಿಯನ್ನು ಮನೆ ಕೆಲಸಕ್ಕೆ ಕರೆಸಿಕೊಂಡು ಅವಳನ್ನು ಗುಪ್ತವಾಗಿ ಬಲಾತ್ಕರಿಸುತ್ತಾನೆ.
ನಾನು ಬರೆದಿರುವ ವಿಚಾರಗಳು ಒಂದು ಚಲನಚಿತ್ರದ ಕಥೆಯಲ್ಲ ... ದೂರದರ್ಶನದಲ್ಲಿ ಬಿತ್ತರವಾಗುವ ಕಲ್ಪನೆಯ ಚಿತ್ರಣವೂ ಅಲ್ಲ...


ಇನ್ನು ಚಲನಚಿತ್ರಕ್ಕೆಬಂದರೆ ಒಂದು ಚಿತ್ರದಲ್ಲಿ ನಾಯಕಿ ಒಬ್ಬ ಖಳ ನಟನ ಬಗ್ಗೆ " ಲೋ ನಿಮ್ಮಪ್ಪ... ನಿಮ್ಮಮ್ಮನ ಜೊತೆ ಮಲಗದೇ ಹೋಗಿದ್ದರೆ ನೀನು ಈ ಭೂಮಿಯ ಮೇಲೆ ಹುಟ್ಟುತ್ತಿರಲೇ ಇಲ್ಲ " ಎನ್ನುವ ಮಾತಿನ ಸಂಭಾಷಣೆ. ಇಂತಹ ಮಾತುಗಳು ಚಲನಚಿತ್ರ ನೋಡುವ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ? ನಾವು ಹುಡುಗರಿದ್ದಾಗ ನಾವು ಸಿನಿಮಾದಲ್ಲಿ ನೋಡಿದ ಮಾತುಗಳನ್ನು ಅದೇ ಶ್ಯಲಿಯಲ್ಲಿ ಹೇಳುತಿದ್ದೆವು. ಇನ್ನು ಈ ರೀತಿಯ ಸಂಭಾಷಣೆ !!! ಇನ್ನು ಮೆಜೆಸ್ಟಿಕ್ನಲ್ಲಿ ಮೈ ಮಾರಿಕೊಳ್ಳುವವರ ಕಥೆ .. ಹೆಚ್ಚುತ್ತಿರುವ ಅಕ್ರಮ ಸಂಬಂಧಗಳು, ಸಮಾಜದ ಸವಾಲುಗಳು ... ನಮ್ಮ ಜವಾಬ್ದಾರಿ .. !!!ನಮಗೇಕೆ ಪರರ ಚಿಂತೆ - ತನ್ನ ತನುವ ಸಂತೈಸಿಕೋ, ತನ್ನ ಮನವ ಸಂತೈಸಿಕೋ ನೆರೆ ಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲ ಸಂಗಮದೇವ ಎನ್ನುವ ಮಾತು ಬಹಳ ಸೂಕ್ಷ್ಮವಾಗುತ್ತದೆ. ಕಾಮ ಮತ್ತು ಕಾಂಚಾಣ ಕಲಿಯುಗ ಅಂತ್ಯವಾಗುವ ಸುನಾಮಿಗಳು...


ನನಗಿನ್ನೂ ಚೆನ್ನಾಗಿ ನೆನಪಿದೆ ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ನಮ್ಮ ಸಂಬಂಧಿಕರೊಬ್ಬರು ನಮಗೆ ಕಾಮ ಪ್ರಚೋದನೆಯ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದರು. ತಾನೊಬ್ಬ ಮಹಾನ್ ಪಂಡಿತ ಎಂಬ ಸ್ವ-ಪ್ರಶಂಶೆ ಮನುಷ್ಯ . ತಾನೊಬ್ಬನೇ ಗಂಡು ಎನ್ನುವಂತೆ ಮಾಡಿದ ಕಚಡಾ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಕುಡಿತದ ದಾಸನೂ ಆದರು. ನನ್ನ ಮನಸ್ಸಿನಿಂದ ಅವರ ವಿಚಾರಗಳನ್ನು ಕಂಟ್ರೋಲ್ ಆಲ್ಟ್ ಡಿಲೀಟ್ ಮಾಡದೇ ಹೋಗಿದ್ದರೆ ???
ಕಾಮ ಎಂದರೇನು ಎಂದು ತಿಳಿಯದ ಆ ವಯಸ್ಸಿನಲ್ಲಿ ಹಾಸ್ಯ ನಟ ಸ್ನೇಹಿತನೊಬ್ಬನ ಊರಿನಲ್ಲಿ ನಡೆದ ಘಟನೆ ಒಬ್ಬ ವ್ಯಕ್ತಿ ತನ್ನ ಮಗಳನ್ನೇ ಮದುವೆಯಾಗಿ ಅವರಿಗೊಂದು ಮಗುವಿತ್ತು. ಆ ವ್ಯಕ್ತಿ ಆ ಮಗುವಿನ ತಂದೆಯೂ ಹೌದು ತಾತನೂ ಹೌದು. ತಾತ ಅಂದರೆ ಹಳಗನ್ನಡದಲ್ಲಿ ತಂದೆ ಎಂದೇ ಅರ್ಥ ಅಂತ ಕೇಳಿದ ನೆನಪು. ನಾವು ಅಮಾಯಕರೆನಲ್ಲ ಎಲ್ಲ ವಿಷಯಗಳು ನಮಗೆ ತಿಳಿದಿದ್ದರೂ ನಮ್ಮ ವಿವೇಚನೆ ಸರಿಯಾಗಿತ್ತು ಹಾಗೆ ನಮ್ಮ ಜನರೇಶನ್ ಬಚಾವ್.


ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಸ್ವಲ್ಪ ಅರಿವು ಮೂಡಿಸುವ ಕೆಲಸ ಪ್ರತಿ ಮನೆಯಲ್ಲೂ ನಡೆಯಬೇಕು. ಸ್ವಾಸ್ಥ್ಯ ಸಮಾಜಕ್ಕೆ ನಮ್ಮ ಮಕ್ಕಳನ್ನು ಸಿದ್ದಗೊಳಿಸಬೇಕು. ಅಸಂತುಷ್ಟ ಗುಪ್ತ ಕಾಮ ಪ್ರತಿ ವ್ಯಕ್ತಿಯ ಸಹಜತೆ. ನಮ್ಮ ಹುಟ್ಟು - ನಮ್ಮ ಪೀಳಿಗೆಯ ಹುಟ್ಟು - ಮುಂದಿನ ಪೀಳಿಗೆಯ ಹುಟ್ಟು ಎಲ್ಲ ಸೃಷ್ಟಿ ಬಗೆಗಿನ ವಿಚಾರವೇ ಕಾಮ. ನಮ್ಮ ಹುಟ್ಟಿಗೆ ಕಾರಣವಾದ ಕಾಮ ನಮ್ಮ ಸಾವಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತದೆ. ಗಂಡು ಹೆಣ್ಣು ಪರಸ್ಪರ ಆಕರ್ಷಿತರಾಗಿ ಕಾಮ ಪ್ರಚೋದನೆ ಸಹಜವಾದರೂ ತಾಯಿ.. ಚಿಕ್ಕಮ್ಮ ... ದೊಡ್ಡಮ್ಮ ... ಅಕ್ಕ ... ತಂಗಿ ... ಅತ್ತೆ .... ಅತ್ತಿಗೆ ... ಅಪ್ಪ .. ಚಿಕ್ಕಪ್ಪ ... ದೊಡ್ಡಪ್ಪ ... ಭಾವ .. ಮೈದುನ ... ಮಾವ ಹೀಗೆ ಬಾಂಧವ್ಯಗಳಿಗೆ ಅರ್ಥವಿರಬೇಕು. ಅವುಗಳಿಗೆ ನ್ಯಾಯ ಒದಗಬೇಕು. ಪ್ರಖ್ಯಾತ ನಟರೊಬ್ಬರ ಅನಧಿಕೃತ ಮಗ ಆತ .. ಪ್ರಖ್ಯಾತ ರಾಜಕಾರಣಿಗಳ ಮಗಳು ಆಕೆ ... ಯಾರದೋ ಬದುಕಿನ ಖಾಸಗಿ ಸಂಬಂಧ ... ತಮಿಳು ಚಿತ್ರರಂಗದ ಮಹಾನ್ ನಟನೊಬ್ಬ - ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನೊಬ್ಬ ಹೆಣ್ಣು ಬಾಕ ... ಎನ್ನುವ ವಿಚಾರಗಳು ಸತ್ಯವಾದರೂ ಜನರಿಗೆ ಅವರ ಸಾಧನೆಗಳ ಬಗ್ಗೆ ಗೌರವ ಕಡಿಮೆಯಾಗಿಲ್ಲ . ಕಾಮ ನಿಜಕ್ಕೂ ಒಂದು ಖಾಸಗಿ ಬದುಕು ... ತಿಳುವಳಿಕೆ ಸಾಕು ಪ್ರಚೋದನೆ ಬೇಕಿಲ್ಲ . ಏಕೆಂದರೆ ಅದೇ ಒಂದು ಪ್ರಚೋದನೆ ... ಅದೇ ಒಂದು ಅಗ್ನಿ ... ಅಸಂತುಷ್ಟ ಗುಪ್ತ ಕಾಮವನ್ನು ಅದರ ಪಾಡಿಗೆ ಬಿಟ್ಟು ತಲೆ ಕೆಡಿಸಿಕೊಳ್ಳದೆ ಯಾರಿಗೂ ಕೆಡುಕಾಗದೆ ನೋಡಿಕೊಂಡರೆ ಅಷ್ಟೇ ಸಾಕು.

ಕಾಮೆಂಟ್‌ಗಳಿಲ್ಲ: