ಗುರುವಾರ, ಮೇ 12

ಸತ್ಯಂ ಶಿವಂ ಸುಂದರಂ !

ಸೃಷ್ಟಿಯು ಸತ್ಯ. ಸೃಷ್ಟಿಯು ಪ್ರೀತಿಯ ಅಂತಃಕರಣ. ಸೃಷ್ಟಿಯು ಸುಂದರ. ಜಗತ್ತಿನ ಸಕಲ ಜೀವ ರಾಶಿಗಳೂ ಉನ್ನತವಾದವುಗಳು. ಪ್ರತಿ ಜೀವಿಯೂ ಅಸಾಮಾನ್ಯವಾದ ಪ್ರತಿಭೆಯನ್ನು ಹೊಂದಿರುವುದು ಸೃಷ್ಟಿಯ ರಹಸ್ಯ. ಭಕ್ತಿ, ಪ್ರೀತಿ ಮತ್ತು ಪ್ರಕೃತಿಯೇ ಬದುಕಿನ ಜೀವಾಳ. ಭಕ್ತಿ ಎಂದರೆ ನಿಜವಾದ ಪ್ರೀತಿ. ಸಕಲ ಜೀವರಾಶಿಗಳಿಗೆ ಕಾರಣವಾದ ಪಂಚಭೂತಗಳು ಬದುಕಿಗೆ ನಿಜವಾದ ಆಸರೆ. ನಮ್ಮೆಲ್ಲರ ಮೂಲ ಭೂತ ತತ್ವಗಳು ಸತ್ಯ. ಭಕ್ತಿ, ಪ್ರೀತಿ ಮತ್ತು ಸುಂದರ ಸೃಷ್ಟಿಯಲ್ಲಿ ನಾವು ಹೇಗೆ ಬದುಕಿದರೂ ಅದು ಸಹಜತೆಯ ನಿಯಮಕ್ಕೆ ದೂರವಾಗಬಾರದು. ನಮ್ಮ ಮನಸ್ಸಿನಲ್ಲಿ ಒಂದು ಸಂಕಲ್ಪ ಏರ್ಪಡಬೇಕು ಅದನ್ನು ಅನೂ...ಚಾನವಾಗಿ ಪಾಲಿಸಬೇಕು ಎಂದು ಸಹೃದಯ ಗುರುಗಳೊಬ್ಬರು ನನಗೆ ಪ್ರತಿಜ್ಞಾ ವಿಧಿಯನ್ನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೇಳಿ ಸಂಕಲ್ಪ ಮಾಡಿಸಿದ್ದರು. ಅದು ಹೀಗಿತ್ತು . "ನನ್ನ ಹೆಸರು ಸಿ ಎನ್ ರಮೇಶ್. ನಾನು ಸತ್ಯವನ್ನು ಪ್ರೀತಿಸುವ, ಸುಂದರನಾದ ಸತ್ಯಂ ಶಿವಂ ಸುಂದರಂ. ನಾನೊಬ್ಬ ಸಮರ್ಥ ನಾಯಕ. ನಾನೊಬ್ಬ ಪ್ರಾಮಾಣಿಕ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ನನ್ನ ನೈಜ ಅಸ್ತಿತ್ವವನ್ನು ಗುರುತಿಸಿಕೊಂಡು ಬದುಕುತ್ತಿರುವವನು. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಮೌಲ್ಯಗಳಿಗೆ ಆದರ್ಶಗಳಿಗೆ ಬೆಲೆ ಕೊಟ್ಟು ಜೀವನವನ್ನು ನಡೆಸುತ್ತೇನೆ" ನಿಜಕ್ಕೂ ಈ ಸಂಕಲ್ಪ ನನ್ನ ಜೊತೆಗೆ ಅನುಷ್ಥಾನದಲ್ಲಿ ಇರುವುದು ನನಗೇ ಸಂತೋಷ.


ಬದುಕನ್ನು ಹೇಗೆ ನಡೆಸಬೇಕು ಎನ್ನುವುದು ಒಂದು ಪುಟ್ಟ ವಿವೇಚನೆ. ಬದುಕಿಗೊಂದು ಅರ್ಥವಿರಬೇಕು. ಬದುಕು ಒಂದು ಹುಚ್ಚರ ಸಂತೆಯಂತೆ ಕಂಡು ಬಂದರೂ ಯಾವುದೇ ಸಂಬಂಧಗಳಲ್ಲಿ , ಯಾವುದೇ ಸಂದರ್ಭಗಳಲ್ಲಿ ನಮ್ಮ ಪ್ರತಿಷ್ಠೆ ಮೇಲುಗೈ ಸಾಧಿಸಬೇಕೆಂಬ ಧೋರಣೆ ಮೊದಲು ನಮ್ಮಿಂದ ದೂರವಾಗಬೇಕು. ಅಂತರ್ಮುಖ ತಿಳಿಯಾಗುವುದು ಬಹಳ ಮುಖ್ಯ. ಯಾವುದೇ ಸಮಾಧಾನವಾಗಲಿ, ಸಂತೋಷವಾಗಲಿ ಬಲವಂತವಾಗಿ ಸೃಷ್ಟಿ ಸ್ಥಿತಿ ಲಯಗಳ ವ್ಯಾಪ್ತಿಗೆ ಬರುವುದಿಲ್ಲ. ಇಕ್ಕಟ್ಟಿನ ಸಂದರ್ಭಗಳಲ್ಲಿ ಅನುಚಿತವಾಗಿ ವರ್ತಿಸಿ ಮುಖವಾಡದ ಜೀವನವನ್ನೇ ಯಾಂತ್ರಿಕವಾಗಿ ಕಳೆದು ಬಿಡುವ ನಾವು - ನಾವೇ ಅಲ್ಲ. ನಮಗಾಗಿ ಇನ್ನೊಬ್ಬರು ಎನ್ನುವುದು ಭ್ರಮೆ. ಮಮತೆಯಲ್ಲಿ ತುಂಬಿ ಕೊಡಬಹುದಾದುದ್ದನ್ನು ಅನರ್ಥದಿಂದ ಬೆಂಕಿಯ ಜ್ವಾಲೆಯಂತೆ, ಗೂಳಿಯಂತೆ, ಗಂಡ-ಭೇರುಂಡದಂತೆ ದಟ್ಟವಾಗಿಸಿದರೆ ತಡೆದುಕೊಳ್ಳುವುದು ಹೇಗೆ ? ಸಾಹಿತ್ಯ, ವ್ಯಕ್ತಿತ್ವ, ಸಂಯಮ, ಸಹಕಾರ, ಸಹನೆ, ಸಂಸ್ಕಾರ ಎಷ್ಟಿದ್ದರೂ ಕೆಲವೊಮ್ಮೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಇದು ಸತ್ಯ. ಆದರೂ ಎದೆ ಗುಂದದೆ ಮುನ್ನಡೆಯಬೇಕು. ಅದು ಜೀವನ ಧರ್ಮ ಮತ್ತು ಅನುಭವಿಸಬೇಕಾದ ಕರ್ಮ.


ಬದುಕೊಂದು ದೇಹದ ಆನಂದದ ಅವರ್ಣನೀಯ ಸ್ಥಿತಿ. ಇಡೀ ದೇಹದಲ್ಲಿ ಒಂದು ರೀತಿಯ ವಿದ್ಯುತ್ ಸಂಚಾರ. ಜೊತೆ ಜೊತೆಗೆ ಮೈ ತಣ್ಣಗಾಗುವಂತೆ, ನಡುಗುವಂತೆ, ಕಂಪಿಸುವಂತೆ, ಕುಣಿಯುವಂತೆ ಹೇಳಿಕೊಳ್ಳಲಾಗದ ಯಾವುದೋ ಒಂದು ರೋಮಾಂಚನ ಸ್ಥಿತಿಯ ಪೂರ್ಣ ಹಾಸ ಭಾಸ. ಮನಸ್ಸು ಹಗುರವಾಗಿ ಹಗುರವಾಗಿ ಹೊಸ ಭಾವನೆಗಳನ್ನು ಪುಷ್ಟೀಕರಿಸಿ ಬೆಳೆಯುವ ಸಂಭ್ರಮ. ಕಣ್ಣಿನಲ್ಲಿ ಕಾಂತಿ, ಕಾಂತಿಯಲ್ಲಿ ಸದಾ ಕನಸು, ಕನಸ್ಸುಗಳಿಗೆ ಕಲ್ಪನೆ, ಕಲ್ಪನೆಗಳಲ್ಲಿ ಸುಂದರತೆ, ಆ ಸುಂದರತೆ ನನಗೆ ಸಂಬಂಧಿಸಿದ್ದು ಎನ್ನುವ ಖುಷಿ- ಹೆಮ್ಮ., ಹೆಮ್ಮೆಗಳಿಂದ ಹೆಮ್ಮರದಂತೆ ಬೆಳೆಯುವ ಗಟ್ಟಿ ಸಂಬಂಧ . ಈ ಸಂಬಂದಕ್ಕೆ ಹಾತೊರೆಯುವ ಮೈ ಮನಗಳ ಆತುರತೆ, ಅಪೇಕ್ಷೆ. ಸಂಭಾಷಿಸಬೇಕು, ನೋಡಬೇಕು , ಅನುಭವಿಸಬೇಕು, ಮನಸ್ಸಿಗೆ ಬಂದಂತೆ ನಡೆದುಕೊಳ್ಳಬೇಕು ಎಂಬ ಸಂಕಲ್ಪಗಳು. ಎಲ್ಲಾ ಕೆಲಸಗಳಲ್ಲಿಯೂ ಹೊಸ ಹುರುಪು. ಬದುಕಿನ ಧ್ಯೇಯಗಳ ಬಗ್ಗೆ ಗಂಭೀರ ಚಿಂತನೆ. ಹಿರಿದಾದ ಸಾಧನೆ ಮಾಡಬೇಕೆಂಬ ಛಲ. ಪ್ರತಿ ನಿಲುವಿನಲ್ಲಿಯೂ ಧೃಡತೆ ಆತ್ಮ ವಿಶ್ವಾಸ, ಸರಳತೆ ಮತ್ತು ಸುಜನ ಮನೋಭಾವ

ಕಾಮೆಂಟ್‌ಗಳಿಲ್ಲ: