ಗುರುವಾರ, ಮೇ 12

ಬಾಡಿ ಹೋಗುವ ಬದುಕು...

ಪುಟ್ಟ ಮೊಗ್ಗು, ಘಮ ಘಮ ಹೂವು,ಘಮವೆಲ್ಲಾ ಇಂಗಿ ಬಾಡಿ ಹೋಗುವ ಹಾಗಲ್ಲವೇ ನಮ್ಮ ಬದುಕು.ಬದುಕಿನ ದಾರಿಯಲಿ ಸಂಗಾತಿಗಳು,ಸಂಸಾರಗಳು,ಪೀಳಿಗೆಗಳು ಮತ್ತೆ ವಸಂತ.ಹೊಸ ಜನ್ಮ,ಜೀವನಾ ಸಂಜೀವನಾ.ಜೀವಿಸುತ್ತಾ ಜೀವನ್ಮರಣ.ಪುನರ್ಜನ್ಮ.ಇನ್ನು ನಾನು ನೀವು ಎಂಬ ಅಸ್ತಿತ್ವಗಳು!!! ಉಸಿರಾಡುವ ತನಕ...ಉಸಿರಿದ್ದರೂ ಹಸಿವಿರುವ ತನಕ...ಹಸಿವಿದ್ದರೂ ನೀಗಿಸುವ ಶಕ್ತಿಯಿರುವ ತನಕ, ಶಕ್ತಿಯಿದ್ದರೂ ಕುಂದುವ ತನಕ..
ಕುಂದಿದರೂ ಕಮರುವ ತನಕ.ಒಟ್ಟಾರೆ ಹಿಂಡಿ ಹಿಪ್ಪೆ ಮಾಡಿ ಎಕ್ಕಾ ಮಕ್ಕಾ ಒದ್ದು ಹಣ್ಣುಗಾಯಿ ಈಡುಗಾಯಿಗಳಾಗಿ ಹೋಗುವ ಖಚಿತತೆ ಮಾತ್ರ ನಿಸ್ಸಂದೇಹ....


ನಿಮಗೆ ಆಲೆಮನೆ ನೆನಪಿದೆಯೇ? ಗಾಣದೆತ್ತುಗಳು? ಕುದಿಯುತ್ತಿರುವ ಬೆಲ್ಲದ ಪಾಕದಲ್ಲಿ ಅದ್ದಿ ತೆಗೆದ ಕಬ್ಬಿನ ತುಂಡು.ಕುದಿಯುವ ಬೆಲ್ಲದ ಪಾಕದಲ್ಲಿ ಹಾಕಿ ತೆಗೆದ ಒಣಕೊಬ್ಬರಿ ಅಥವಾ ನೀರು ಮಾತ್ರ ಖಾಲಿ ಮಾಡಿ ಪಾಕದಲ್ಲಿ ಹಾಕಿ ತೆಗೆದ ಹಸಿ ಕಾಯಿಯ ಪೂರ್ಣ ಹೋಳು, ಕೆಂಡದಲ್ಲಿ ಸುಟ್ಟ ಹಲಸಿನ ಕಾಯಿ ಬೀಜದ ರುಚಿ,ಸುಟ್ಟ ಗೆಣಸಿನ ಸವಿರುಚಿ,ಕಾದ ಕೆಂಡದಲ್ಲಿ ಸುಟ್ಟ ಬದನೇಕಾಯಿ ಬಳಸಿ ಒಗ್ಗರಣೆ ಹಾಕಿ ಮಾಡಿದ ಉಪ್ಪು ಸಾರು.ಇದೆಲ್ಲಾ ಇಂದಿನ ಪೀಳಿಗೆಗೆ ತಿಳಿದಿಲ್ಲ.ಬದುಕು ಸುಂದರವಾಗಿದೆಯೇ ಸುಂದರವಾಗಿತ್ತೇ ಸುಂದರವಾಗುತ್ತದೆಯೇ???
ನಮ್ಮ ತಾತಾ ಮುತ್ತಾತಂದಿರ ತಾಕತ್ತು ನಮ್ಮ ಅಪ್ಪನ ತಲೆಮಾರಿಗೆ,ಅವರ ತಾಕತ್ತು ನಮ್ಮ ತಲೆಮಾರಿಗೆ ನಮ್ಮ ತಾಕತ್ತು ಮುಂದಿನ ತಲೆಮಾರಿಗೆ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ ಯಾವುದೋ ಸ್ವೇಚ್ಛಾಚಾರದ ಮಾಯಲೋಕವೆಂಬ ಹುರುಪು ಪುನಃ ಕಾಲಚಕ್ರದಲ್ಲಿ ಕಾಣುವ ಕ್ಷೀಣತೆ.ನಿನ್ನೆ ಸಿರೂರು ಪಾರ್ಕಿನ ಮೂಲೆಯಲ್ಲಿ ಕಂಡ ಚುರುಮುರಿ ಗಾಡಿಗೆ ಹೋಗಿದ್ದೆ ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿ ಗಾಡಿ ಇಟ್ಟುಕೊಳ್ಳುತ್ತಿದ್ದ ವ್ಯಕ್ತಿಯ ಹಾಗೆ ಹೋಲಿಕೆ ಇದ್ದ ವ್ಯಕ್ತಿ. ಗಾಡಿಯ ಮೂಲೆಯಲ್ಲಿ ಅವರಪ್ಪನ ಪುಟ್ಟ ಫೋಟೋ ಅದಕ್ಕೊಂದು ಹೂವು.ಅದೂ ಬಾಡಿತ್ತು

ಕಾಮೆಂಟ್‌ಗಳಿಲ್ಲ: