ಗುರುವಾರ, ಮೇ 12

ಇಂದ್ರಾಣಿಯ ನೆನಪಿನಿಂದ ......

ಅದು ಏಕೋ ಗೊತ್ತಿಲ್ಲ . ಒಂದೆರಡು ದಿನಗಳಿಂದ ಇಂದ್ರಾಣಿಯ ನೆನಪು ಬಹಳ ಆಗುತ್ತಿತ್ತು. ಇವತ್ತು ಮೈಲಾಪುರದ ಕಪಾಲೀಶ್ವರ ದೇವಸ್ಥಾನದಲ್ಲಿ ಬೆಳ್ಳಂ ಬೆಳಿಗ್ಗೆ ಒಬ್ಬಳು ಅಸ್ಪಷ್ಟವಾಗಿ ಓಂ ನಮಃ ಶಿವಾಯ ಅಂತ ಹೇಳಿಕೊಂಡು ಪ್ರದಕ್ಷಿಣೆ ಹಾಕುತ್ತಾ ಇದ್ದಳು. ಮತ್ತೆ ಇಂದ್ರಾಣಿಯ ನೆನಪು. ದೇವರನ್ನು ನೋಡುತ್ತಾ ನಿಂತ ನನಗೆ ಒಂದೇ ಪ್ರಶ್ನೆ. ದೇವರು ಪ್ರತಿಯೊಬ್ಬ ಜೀವಿಗೂ ಒಂದೊಂದು ಅಸ್ತಿತ್ವ, ಸ್ವಂತಿಕೆ, ಬುದ್ದಿವಂತಿಕೆ ಏನಾದರೊಂದನ್ನು ಕೊಟ್ಟಿರುತ್ತಾನೆ. ಅಂತೆಯೇ ಕೆಲವರನ್ನು ವಿಕಲಾಂಗರನ್ನಗಿರಿಸುತ್ತಾನೆ. ಕೆಲವರನ್ನು ಬುದ್ಧಿ ಮಾಂದ್ಯತೆ ಇಂದ ಹುಟ್ಟಿಸಿರುತ್ತಾನೆ. ಇದೆ...ಲ್ಲಾ ಪೂರ್ವ ಜನ್ಮದ ಪಾಪ ಪುಣ್ಯದ ಫಲವೋ ? ಗೊತ್ತಿಲ್ಲ. ದೇವಸ್ಥಾನದ ಹೊರಗಡೆ ಇರುವ ಭಿಕ್ಷುಕರು, ಅವರಲ್ಲಿ ಕೆಲವರು ಕಾವಿ ವಸ್ತ್ರ ತೊಟ್ಟು ಹಣೆ ತುಂಬಾ ವಿಭೂತಿ ಇಟ್ಟು ಬಹಳ ತೇಜಸ್ಸಿನಿಂದ ಕಾಣುವ ಬೈರಾಗಿಗಳು ಇರುತ್ತಾರೆ. ಭಗವಂತ ಯಾವುದೇ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು ಅಲ್ಲವೇ ? ಗೊತ್ತಿಲ್ಲ. ಇರಲಿ, ಇಂದ್ರಾಣಿ ಬದುಕಿದ್ದಿದ್ದರೆ ಇವತ್ತಿಗೆ ಆಕೆಗೆ ಐವತ್ತಾರು ವರ್ಷ. ಈಕೆ ನಮ್ಮಮ್ಮನ ಚಿಕ್ಕಮ್ಮ ಆದರೆ ನಮ್ಮಮ್ಮನಿಗಿಂತ ನಾಲ್ಕು ವರ್ಷ ಚಿಕ್ಕವರು. ನಮ್ಮಜ್ಜಿಯ ತಂಗಿ. ನಾನು ಮೆಚ್ಚಿದ್ದ ನನ್ನ ಮುತ್ತಜ್ಜಿಯ ಕಡೆಯ ಮಗಳು. ಇಂದ್ರಾಣಿ ನಾನು ಜೀವನದಲ್ಲಿ ಮೊದಲ ಬಾರಿಗೆ ನೋಡಿದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೂನ್ಯತೆ ಹೊಂದಿದ್ದವರು. ಮೊದಲು ಬಾಲ್ಯದಲ್ಲಿ ಮಗುವಿದ್ದಾಗ ಚೆನ್ನಾಗಿಯೇ ಇದ್ದರಂತೆ ಹಾಗೆಯೇ ಬೆಳೆಯುತ್ತಾ ಯಾವುದೋ ಕೆಟ್ಟ ಖಾಯಿಲೆಯಿಂದ ಅವರು ಬಳಲಿದರಂತೆ. ನನಗೆ ನೆನಪಿರುವುದು ಇಷ್ಟೇ. ಇಂದ್ರಾಣಿ ಒಂದು ಲಂಗ ಬ್ಲೌಸ್ ಹಾಕಿಕೊಂಡು ದೊಡ್ಡವರಾಗಿದ್ದ ಹೆಂಗಸು. ಯಾರೇ ಮಾತನಾಡಿಸಿದರೂ ನಗುತ್ತಿದ್ದರು. ಅವರದೇ ಭಾಷೆಯಲ್ಲಿ ಲಂಗ ಬಲೆ(ಬಳೆ ಇರಬಹುದು) ಓಲೆ, ಹಾಲು ಕೊಡು ಅನ್ನುತ್ತಿದ್ದರು. ಅದು ಅವರಿಗಾಗಿ ಕುಡಿಯಲು ಕೇಳುತ್ತಿದ್ದ ಹಾಲು ಅಲ್ಲ . ಆದರೆ ಮನೆಗೆ ಬಂದವರಿಗೆ ಹಾಲು ಕೊಡಿ ಅಂತ. ಆ ಅಮಾಯಕ ಮುಖ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನಿದ್ದು ಬಿಡುತ್ತಿದ್ದರು. ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದರು. ಏನನ್ನೋ ಮಾತಾಡಿಕೊಳ್ಳುತ್ತಿದ್ದರು. ಏನನ್ನಾದರೂ ತಿನ್ನಲು
ಕೊಟ್ಟರೆ ತಿನ್ನುತ್ತಿದ್ದರು ಅಷ್ಟೇ. ಕೆಲವೊಮ್ಮೆ ಮನಸ್ಸು ತುಂಬಿ ಬರುತ್ತದೆ. ನನಗೆ ಅನೇಕ ವಿಕಲಾಂಗ ಸಬಲ ಸ್ನೇಹಿತರ ಪರಿಚಯವಿದೆ. ಪೋಲಿಯೊ ರೋಗದಿಂದ ಸ್ವಾಧೀನತೆ ಕಳೆದು ಕೊಂಡಿದ್ದರೂ ಸಾಕಷ್ಟು ಸಾಧನೆ ಮಾಡಿರುವ ಸ್ನೇಹಿತರಿದ್ದಾರೆ. ಅವರುಗಳ
ಮುಂದೆ ನಾನು ಎಷ್ಟೊಂದು ಸಣ್ಣವನು ಎಂಬ ಮನವರಿಕೆ ನನಗಿದೆ. ಇದೆಲ್ಲದರ ಮಧ್ಯೆ ಕಛೇರಿಗೆ ಹೋದ ಮೇಲೆ ಮತ್ತೊಂದು ಆಶ್ಚರ್ಯ. ಇವರೆಲ್ಲರಿಗೂ ಪ್ರೀತಿಯಿಂದ ಹಾರೈಸಿ ಅವರ ಸ್ಪೂರ್ತಿ ಪಡೆದರೆ ಸಾಕು ನಾನು ಧನ್ಯ. ಎಂದೋ ಸತ್ತು ಹೋದ ಇಂದ್ರಾಣಿಯ ನೆನಪು ಈಗೇಕಾಗುತ್ತಿದೆ ? ಖಂಡಿತ ಗೊತ್ತಿಲ್ಲ. ಹಸುವಿನ ಹಾಡು ಪದ್ಯದ ಪುಣ್ಯಕೋಟಿಯ ಪಾತ್ರವನ್ನು ನಾನು ಅರಿತದ್ದು ವರ್ಷ ಸಾವಿರದ ಒಂಬೈನೂರ ಎಂಬತ್ತೆರಡು. ನನಗಾಗ ಹನ್ನೊಂದು ವರ್ಷಗಳು.

ಸತ್ಯಂ ಶಿವಂ ಸುಂದರಂ !

ಸೃಷ್ಟಿಯು ಸತ್ಯ. ಸೃಷ್ಟಿಯು ಪ್ರೀತಿಯ ಅಂತಃಕರಣ. ಸೃಷ್ಟಿಯು ಸುಂದರ. ಜಗತ್ತಿನ ಸಕಲ ಜೀವ ರಾಶಿಗಳೂ ಉನ್ನತವಾದವುಗಳು. ಪ್ರತಿ ಜೀವಿಯೂ ಅಸಾಮಾನ್ಯವಾದ ಪ್ರತಿಭೆಯನ್ನು ಹೊಂದಿರುವುದು ಸೃಷ್ಟಿಯ ರಹಸ್ಯ. ಭಕ್ತಿ, ಪ್ರೀತಿ ಮತ್ತು ಪ್ರಕೃತಿಯೇ ಬದುಕಿನ ಜೀವಾಳ. ಭಕ್ತಿ ಎಂದರೆ ನಿಜವಾದ ಪ್ರೀತಿ. ಸಕಲ ಜೀವರಾಶಿಗಳಿಗೆ ಕಾರಣವಾದ ಪಂಚಭೂತಗಳು ಬದುಕಿಗೆ ನಿಜವಾದ ಆಸರೆ. ನಮ್ಮೆಲ್ಲರ ಮೂಲ ಭೂತ ತತ್ವಗಳು ಸತ್ಯ. ಭಕ್ತಿ, ಪ್ರೀತಿ ಮತ್ತು ಸುಂದರ ಸೃಷ್ಟಿಯಲ್ಲಿ ನಾವು ಹೇಗೆ ಬದುಕಿದರೂ ಅದು ಸಹಜತೆಯ ನಿಯಮಕ್ಕೆ ದೂರವಾಗಬಾರದು. ನಮ್ಮ ಮನಸ್ಸಿನಲ್ಲಿ ಒಂದು ಸಂಕಲ್ಪ ಏರ್ಪಡಬೇಕು ಅದನ್ನು ಅನೂ...ಚಾನವಾಗಿ ಪಾಲಿಸಬೇಕು ಎಂದು ಸಹೃದಯ ಗುರುಗಳೊಬ್ಬರು ನನಗೆ ಪ್ರತಿಜ್ಞಾ ವಿಧಿಯನ್ನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೇಳಿ ಸಂಕಲ್ಪ ಮಾಡಿಸಿದ್ದರು. ಅದು ಹೀಗಿತ್ತು . "ನನ್ನ ಹೆಸರು ಸಿ ಎನ್ ರಮೇಶ್. ನಾನು ಸತ್ಯವನ್ನು ಪ್ರೀತಿಸುವ, ಸುಂದರನಾದ ಸತ್ಯಂ ಶಿವಂ ಸುಂದರಂ. ನಾನೊಬ್ಬ ಸಮರ್ಥ ನಾಯಕ. ನಾನೊಬ್ಬ ಪ್ರಾಮಾಣಿಕ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ನನ್ನ ನೈಜ ಅಸ್ತಿತ್ವವನ್ನು ಗುರುತಿಸಿಕೊಂಡು ಬದುಕುತ್ತಿರುವವನು. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಮೌಲ್ಯಗಳಿಗೆ ಆದರ್ಶಗಳಿಗೆ ಬೆಲೆ ಕೊಟ್ಟು ಜೀವನವನ್ನು ನಡೆಸುತ್ತೇನೆ" ನಿಜಕ್ಕೂ ಈ ಸಂಕಲ್ಪ ನನ್ನ ಜೊತೆಗೆ ಅನುಷ್ಥಾನದಲ್ಲಿ ಇರುವುದು ನನಗೇ ಸಂತೋಷ.


ಬದುಕನ್ನು ಹೇಗೆ ನಡೆಸಬೇಕು ಎನ್ನುವುದು ಒಂದು ಪುಟ್ಟ ವಿವೇಚನೆ. ಬದುಕಿಗೊಂದು ಅರ್ಥವಿರಬೇಕು. ಬದುಕು ಒಂದು ಹುಚ್ಚರ ಸಂತೆಯಂತೆ ಕಂಡು ಬಂದರೂ ಯಾವುದೇ ಸಂಬಂಧಗಳಲ್ಲಿ , ಯಾವುದೇ ಸಂದರ್ಭಗಳಲ್ಲಿ ನಮ್ಮ ಪ್ರತಿಷ್ಠೆ ಮೇಲುಗೈ ಸಾಧಿಸಬೇಕೆಂಬ ಧೋರಣೆ ಮೊದಲು ನಮ್ಮಿಂದ ದೂರವಾಗಬೇಕು. ಅಂತರ್ಮುಖ ತಿಳಿಯಾಗುವುದು ಬಹಳ ಮುಖ್ಯ. ಯಾವುದೇ ಸಮಾಧಾನವಾಗಲಿ, ಸಂತೋಷವಾಗಲಿ ಬಲವಂತವಾಗಿ ಸೃಷ್ಟಿ ಸ್ಥಿತಿ ಲಯಗಳ ವ್ಯಾಪ್ತಿಗೆ ಬರುವುದಿಲ್ಲ. ಇಕ್ಕಟ್ಟಿನ ಸಂದರ್ಭಗಳಲ್ಲಿ ಅನುಚಿತವಾಗಿ ವರ್ತಿಸಿ ಮುಖವಾಡದ ಜೀವನವನ್ನೇ ಯಾಂತ್ರಿಕವಾಗಿ ಕಳೆದು ಬಿಡುವ ನಾವು - ನಾವೇ ಅಲ್ಲ. ನಮಗಾಗಿ ಇನ್ನೊಬ್ಬರು ಎನ್ನುವುದು ಭ್ರಮೆ. ಮಮತೆಯಲ್ಲಿ ತುಂಬಿ ಕೊಡಬಹುದಾದುದ್ದನ್ನು ಅನರ್ಥದಿಂದ ಬೆಂಕಿಯ ಜ್ವಾಲೆಯಂತೆ, ಗೂಳಿಯಂತೆ, ಗಂಡ-ಭೇರುಂಡದಂತೆ ದಟ್ಟವಾಗಿಸಿದರೆ ತಡೆದುಕೊಳ್ಳುವುದು ಹೇಗೆ ? ಸಾಹಿತ್ಯ, ವ್ಯಕ್ತಿತ್ವ, ಸಂಯಮ, ಸಹಕಾರ, ಸಹನೆ, ಸಂಸ್ಕಾರ ಎಷ್ಟಿದ್ದರೂ ಕೆಲವೊಮ್ಮೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಇದು ಸತ್ಯ. ಆದರೂ ಎದೆ ಗುಂದದೆ ಮುನ್ನಡೆಯಬೇಕು. ಅದು ಜೀವನ ಧರ್ಮ ಮತ್ತು ಅನುಭವಿಸಬೇಕಾದ ಕರ್ಮ.


ಬದುಕೊಂದು ದೇಹದ ಆನಂದದ ಅವರ್ಣನೀಯ ಸ್ಥಿತಿ. ಇಡೀ ದೇಹದಲ್ಲಿ ಒಂದು ರೀತಿಯ ವಿದ್ಯುತ್ ಸಂಚಾರ. ಜೊತೆ ಜೊತೆಗೆ ಮೈ ತಣ್ಣಗಾಗುವಂತೆ, ನಡುಗುವಂತೆ, ಕಂಪಿಸುವಂತೆ, ಕುಣಿಯುವಂತೆ ಹೇಳಿಕೊಳ್ಳಲಾಗದ ಯಾವುದೋ ಒಂದು ರೋಮಾಂಚನ ಸ್ಥಿತಿಯ ಪೂರ್ಣ ಹಾಸ ಭಾಸ. ಮನಸ್ಸು ಹಗುರವಾಗಿ ಹಗುರವಾಗಿ ಹೊಸ ಭಾವನೆಗಳನ್ನು ಪುಷ್ಟೀಕರಿಸಿ ಬೆಳೆಯುವ ಸಂಭ್ರಮ. ಕಣ್ಣಿನಲ್ಲಿ ಕಾಂತಿ, ಕಾಂತಿಯಲ್ಲಿ ಸದಾ ಕನಸು, ಕನಸ್ಸುಗಳಿಗೆ ಕಲ್ಪನೆ, ಕಲ್ಪನೆಗಳಲ್ಲಿ ಸುಂದರತೆ, ಆ ಸುಂದರತೆ ನನಗೆ ಸಂಬಂಧಿಸಿದ್ದು ಎನ್ನುವ ಖುಷಿ- ಹೆಮ್ಮ., ಹೆಮ್ಮೆಗಳಿಂದ ಹೆಮ್ಮರದಂತೆ ಬೆಳೆಯುವ ಗಟ್ಟಿ ಸಂಬಂಧ . ಈ ಸಂಬಂದಕ್ಕೆ ಹಾತೊರೆಯುವ ಮೈ ಮನಗಳ ಆತುರತೆ, ಅಪೇಕ್ಷೆ. ಸಂಭಾಷಿಸಬೇಕು, ನೋಡಬೇಕು , ಅನುಭವಿಸಬೇಕು, ಮನಸ್ಸಿಗೆ ಬಂದಂತೆ ನಡೆದುಕೊಳ್ಳಬೇಕು ಎಂಬ ಸಂಕಲ್ಪಗಳು. ಎಲ್ಲಾ ಕೆಲಸಗಳಲ್ಲಿಯೂ ಹೊಸ ಹುರುಪು. ಬದುಕಿನ ಧ್ಯೇಯಗಳ ಬಗ್ಗೆ ಗಂಭೀರ ಚಿಂತನೆ. ಹಿರಿದಾದ ಸಾಧನೆ ಮಾಡಬೇಕೆಂಬ ಛಲ. ಪ್ರತಿ ನಿಲುವಿನಲ್ಲಿಯೂ ಧೃಡತೆ ಆತ್ಮ ವಿಶ್ವಾಸ, ಸರಳತೆ ಮತ್ತು ಸುಜನ ಮನೋಭಾವ

ಖಾಸಗಿ ಬದುಕಿಗೆ ವಯಸ್ಸಿನ ನಿರ್ಬಂಧ ಯಾಕೆ ?

ಆಪ್ತ ಸಮಾಲೋಚನೆಯಲ್ಲಿ ನಡು ವಯಸ್ಸಿನ ಮಹಿಳೆಯೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು . ನನಗೆ ಮದುವೆಯಾಗಿ ಇಪ್ಪತ್ತೈದು ವರ್ಷಗಳು ಆಯಿತು. ಮಕ್ಕಳು ದೊಡ್ಡವರಾಗಿದ್ದಾರೆ. ನನಗೂ ನನ್ನದೇ ಹವ್ಯಾಸ - ಅಭಿರುಚಿಗಳು ಇವೆ. ಆದರೆ ಸಂಸಾರದ ಜವಾಬ್ದಾರಿಯಿಂದ ನಾನು ಯಾವುದರಲ್ಲೂ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬರೀ ಮನೆ ಕೆಲಸ, ಅಡುಗೆ ಮಾಡಿಕೊಂಡು ಪ್ರಪಂಚದ ಜ್ಞಾನವಿಲ್ಲದೇ ಹೀಗೆ ಇದ್ದುಬಿಡುವುದು ಸರಿಯಾ ಅಥವಾ ಈಗ ನನ್ನ ಅಭಿರುಚಿಗೆ ಅನುಗುಣವಾಗಿ ನಾನು ಸಂತೋಷದಿಂದ ನನ್ನನ್ನು ತೊಡಗಿಸಿಕೊಂಡು ನಾಲ್ಕು ಗೋಡೆಗಳ ಗೃಹಿಣಿ ಎಂಬ ಸ್ಥಾನದಿಂದ ಹೊರಬರುವುದು ಸರಿಯಾ ? ನಿಜಕ್ಕೂ ಒಳ್ಳೆಯ ಪ್ರಶ್ನೆ. ಅನುಮಾನವೇ ಬೇಡ ಬದುಕು ಪ್ರತಿ ವ್ಯಕ್ತಿಗೂ ಒಂದೇ. ಅದನ್ನು ನಮ್ಮ ಮನಸ್ಸು ಬಯಸಿದ ಹಾಗೆ ಅನುಭವಿಸುವುದು ನಿಜಕ್ಕೂ ಸಮಂಜಸ. ಸುಮಾರು ವರ್ಷಗಳಿಂದ ಹಾಗೆ ಗೃಹ ಬಂಧನದಲ್ಲಿ ಇದ್ದು ಈಗ ಸ್ವಲ್ಪ ಮುಕ್ತ ಪ್ರಪಂಚ, ಸಾಮಾಜಿಕ ಸಂಬಂಧ, ಆಸಕ್ತಿ - ಅಭಿರುಚಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಪತಿ ಮತ್ತು ಮಕ್ಕಳು ಯಾವ ರೀತಿ ವರ್ತಿಸುತ್ತಾರೆ ಅನ್ನುವುದು ಅವರ ಸಹಜ ಗೊಂದಲ. ಗಂಡ ಮತ್ತು ಮಕ್ಕಳ ಜೊತೆ ಚರ್ಚಿಸಿ ಸ್ವಲ್ಪ ಅರಿವು ಮೂಡಿಸಿ ಅಭಿರುಚಿಯನ್ನು ಬೆಳೆಸುವುದು - ಬೆಳೆಯುವುದು ನಿಜಕ್ಕೂ ಸ್ವಾಗತಾರ್ಹ.
ಸಾಮಾಜಿಕ ಬದುಕಿನ ಮಜಲುಗಳು ಬದಲಾಗುತ್ತಿವೆ. ಪ್ರತಿ ವ್ಯಕ್ತಿಯೂ ಸಂತೋಷವಾಗಿ ಇರಬೇಕು. ಖಾಸಗಿ ಬದುಕು ಎನ್ನುವುದು ಎಲ್ಲರಿಗೂ ಒಂದು ವ್ಯಕ್ತಿ ಸ್ವಾತಂತ್ರ್ಯ. ಜೊತೆಗೆ ಬದುಕು ಕೂಡ ಒಂದು ರೀತಿಯ ಸತತ ಹೋರಾಟ. ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಸಂತೋಷವಾಗಿರುವುದು ಪ್ರತಿ ವ್ಯಕ್ತಿಯ ಅವಶ್ಯಕತೆ. ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅರ್ಥಪೂರ್ಣವಾದ ವ್ಯಕ್ತಿ ಸ್ವಾತಂತ್ರ್ಯದ ಖಾಸಗಿತನ ಖಂಡಿತ ತಪ್ಪಲ್ಲ. ವಯಸ್ಸಾಗುತ್ತಿದ್ದಂತೆ ಗಂಡ ಅಥವಾ ಹೆಂಡತಿ ಯಾರಾದರೂ ಒಬ್ಬರು ಸಾಯುತ್ತಾರೆ. ಸಾವು ಅನ್ನುವುದು ಸಹಜ. ಇಂತಹ ಸಂದರ್ಭದಲ್ಲಿ ವಿಚಲಿತರಾಗದೆ ನಮ್ಮ ಪಾಲಿನ ಆಯುಷ್ಯವನ್ನು ಅರ್ಥಪೂರ್ಣವಾಗಿ ಕಳೆಯುವುದು ನಿಜಕ್ಕೂ ಅತೀ ಮುಖ್ಯ. ಪ್ರೀತಿ - ಪ್ರೇಮ - ಹಚ್ಚಿಕೊಳ್ಳುವಿಕೆ - ದುಃಖ ನಿರಾಸೆ ಇವೆಲ್ಲಾ ಸಹಜವಾದರೂ ಅದು ನಿರಂತರ ಬದುಕಿನುದ್ದಕ್ಕೂ ಕೊರಗುವಂತೆ ಮಾಡಬಾರದು. ನಾವು ಈ ಭೂಮಿಗೆ ಬರುವಾಗ ಮತ್ತು ಭೂಮಿಯಿಂದ ಹೊರಡುವಾಗ ಏಕಾಂಗಿಯಾಗಿ ಇರುವುದು. ಜೀವಿತಾವಧಿಯಲ್ಲಿ ಮನೆ, ಮಕ್ಕಳು, ಗಂಡ ಅಥವಾ ಹೆಂಡತಿ ಎನ್ನುವ ವ್ಯವಸ್ಥೆ ಎಲ್ಲಾ ಸಂತೋಷವೇ ಅದರೂ ಬದುಕಿನ ಘೋರತೆಗೆ ಮಾತ್ರ ಯಾರೂ ವಿಚಲಿತರಾಗಬಾರದು . ನಮ್ಮ ಹುಟ್ಟಿಗೆ, ನಮ್ಮ ಆಯುಷ್ಯಕ್ಕೆ ತನ್ನದೇ ಆದ ದೈವ ಪ್ರೇರಣೆ ಇರುತ್ತದೆ.
ಶೇಷು ಚಿಕ್ಕಪ್ಪ ಎಂಬ ಸಂಬಂಧಿ ತಮ್ಮ ಐವತ್ತೈದು ವರ್ಷಗಳಾದ ನಂತರ ತಮ್ಮ ಮಡದಿಯನ್ನು ಕಳೆದುಕೊಂಡರು. ತಮಗಿದ್ದ ಮಗ ಮತ್ತು ಮಗಳಿಗೆ ಮದುವೆಯಾಗಿತ್ತು. ಆಮೇಲೆ ಮತ್ತೊಂದು ವಿವಾಹ ಮಾಡಿಕೊಳ್ಳುವ ಮನಸ್ಸು ಹೊಂದಿದರು. ಜನರೆಲ್ಲಾ ಯಾಕಪ್ಪ ಈ ವಯಸ್ಸಿನಲ್ಲಿ ಇನ್ನೊಂದು ಮದುವೆ ಎಂದರು. ಶೇಷು ಚಿಕ್ಕಪ್ಪ ಏಕಾಂಗಿ ತನವನ್ನು ಮೀರಲು ತಮ್ಮ ಹೃದಯದಂತೆ ತಮ್ಮ ವಯಸ್ಸಿಗೆ ಅನುಗುಣವಾದ ಹಿರಿಯ ಮಹಿಳೆಯೊಂದಿಗೆ ಮದುವೆಯಾದರು. ಈಗಲೂ ದಂಪತಿಗಳು ಸುಖವಾಗಿದ್ದಾರೆ. ಮೋಹನ್ ರಾವ್ ಎನ್ನುವ ಮತ್ತೊಬ್ಬ ಸಂಬಂಧಿಕರು ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡರು. ಮೋಹನ್ ರಾವ್ ಬಿಡುವಿನ ವೇಳೆಯಲಿ ಗಂಡು ಹೆಣ್ಣುಗಳ ಜಾತಕ ತೋರಿಸುವ ಮದುವೆಗೆ ಅನುಕೂಲವಾಗುವ ಸಮಾಜ ಸೇವೆ ಮಾಡುತ್ತಿದ್ದರು. ಅವರಿಗೆ ದುಡ್ಡಿನ ಆಸೆ ಇರಲಿಲ್ಲ. ನಿವೃತ್ತರಾದರು. ತಮ್ಮ ಮಗ ಮತ್ತು ಮಗಳಿಗೆ ಮದುಯಾಗಿತ್ತು. ಯಾವುದೋ ಏಕಾಂತ ಕಾಡಲು ಶುರುವಾಯಿತು. ಅವರ ಬಳಿಗೆ ಬಂದ ಹಿರಿಯ ಮಹಿಳೆಯ ಜಾತಕ ನೋಡಿ ತಮ್ಮನ್ನು ಮದುವೆಯಾಗಲು ಅಭ್ಯಂತರ ಇಲ್ಲವೇ ಎಂದು ಕೇಳಿ ಅವರೇ ಮದುವೆಯಾದರು. ಅವರೂ ಖುಷಿಯಾಗಿದ್ದಾರೆ. ನಮಗೆ ಬುದ್ಧಿ ಇಲ್ಲದ ಸಮಯದಲ್ಲಿ ಇವೆಲ್ಲಾ ಏನೋ ದೊಡ್ಡ ಅಪರಾಧದಂತೆ ಕಾಣಿಸುತ್ತಿತ್ತು. ನಿಜಕ್ಕೂ ಇವರೆಲ್ಲಾ ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೊಂದು ಹಿರಿಯ ಹೆಣ್ಣಿಗೆ ಆಶ್ರಯ ಎನ್ನುವ ಬಾಳು ಕೊಟ್ಟು ತಮ್ಮ ಏಕಾಂಗಿ ತನವನ್ನು ಓಡಿಸಿ ಸುಖವಾಗಿ ಇದ್ದಾರೆ.
ಜನ ಏನು ಮಾಡಿದರೂ ಒಂದು ಕೊಂಕು ನುಡಿ ಹೇಳಿಯೇ ಹೇಳುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದಿರಿ ಬಿಡಿ ಎಂದು ಅಭಿನಂದಿಸುತ್ತಾರೆ. ಜೀವನವಿಡೀ ಕೊರಗುವುದಕ್ಕಿಂತ ಪುಟ್ಟ ಪುಟ್ಟ ಸಂತೋಷಗಳಲ್ಲಿ ನಮ್ಮ ಮನಸ್ಸಿಗೆ, ನಮ್ಮ ಹೃದಯಕ್ಕೆ ಪುಟ್ಟ ಪರಿವರ್ತನೆ ಕೊಟ್ಟು ಸುಖವಾಗಿರುವುದು ನಿಜಕ್ಕೂ ಅರ್ಥಪೂರ್ಣ. ಅಂದ ಹಾಗೆ ಇಂತಹವರ ಅನುಕೂಲಕ್ಕೆ ಮತ್ತು ವಿಚ್ಚೇದಿತರಿಗೆ ಮತ್ತು ವಿಧವಾ ವಿವಾಹಗಳಿಗೆ www.parivarthan.com ಎಂಬ ತಾಣವೂ ಕೆಲಸ ಮಾಡುತ್ತಿದೆ ಎನ್ನುವುದು ಒಂದು ಪುಟ್ಟ ಮಾಹಿತಿ ಅಷ್ಟೇ.

ಯಾರೂ ತಪ್ಪಲ್ಲ ಮತ್ತು ಯಾರದೂ ತಪ್ಪಿಲ್ಲ ...

ಸರಿ ಮತ್ತು ತಪ್ಪು ಎಂಬ ಎರಡು ಅಂಶಗಳು ಬದುಕಿನಲ್ಲಿ ಚಿಂತನೆಯ ದೃಷ್ಟಿಯಿಂದ ಪ್ರಧಾನ ಪಾತ್ರ ವಹಿಸುತ್ತದೆ. ಈ ಎರಡಂಶಗಳ ಮೌಲ್ಯ ಮಾಪನ ಕೇವಲ ಸ್ವ - ವಿಮರ್ಶೆಯಿಂದ ಮಾತ್ರ ಮಾಡ ಬೇಕಷ್ಟೇ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರವೃತ್ತಿಯೇ ಇಲ್ಲಿ ಹೆಚ್ಚು ಪ್ರಸ್ತುತ. ಒಂದು ವ್ಯವಸ್ಥೆಯ ಬಗ್ಗೆ, ಒಬ್ಬ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ವ್ಯಕ್ತವಾಗುವ "ಸರಿ" ಅಥವಾ "ತಪ್ಪು" ನಿಲುವುಗಳು ಪ್ರಕಟಗೊಳ್ಳದೆ ನಮ್ಮಲ್ಲಿಯೇ ಅಂತರ್ಮುಖಿಯಾಗಿರುವುದು ಮುಖ್ಯವೆನಿಸುತ್ತದೆ. ಯಾವುದೇ ವ್ಯಕ್ತಿ ಮತ್ತೊಬ್ಬನಿಂದ ವಿಮರ್ಶಾ ದೃಷ್ಟಿಯಿಂದ ಹೊರ ಬರುವ ಅಭಿಪ್ರಾಯಗಳನ್ನು ಒಪ್...ಪಿಕೊಳ್ಳುವುದಿಲ್ಲ. ಬದಲಾಗಿ ಅಂತಹ ನೇರ ಅಭಿಪ್ರಾಯಗಳನ್ನು ಕ್ರೀಡಾತ್ಮಕವಾಗಿ ತೆಗೆದುಕೊಳ್ಳದೆ ಕೊರಗುತ್ತಾ ಕುಗ್ಗಿ ಹೋಗುವ ಕೀಳರಿಮೆಯೇ ಹೆಚ್ಚಾಗುತ್ತದೆ. ಎಷ್ಟೇ ಪ್ರೀತಿ - ಪಾತ್ರರಾದವರೂ ಅತೀ ಸಲುಗೆಯಿಂದ ವರ್ತಿಸುವವರ ಭಾವನೆಗಳ ಸ್ಥಿತಿಯೂ ಅಷ್ಟೇ. ಇದಕ್ಕೊಂದು ಸುಲಭದ ಸಂಕಲ್ಪವೆಂದರೆ ಯಾರಲ್ಲಿ ಯಾವುದೇ ತಪ್ಪು ಕಂಡು ಬಂದರೂ ಅದನ್ನು ಯಾವುದೇ ಕಾರಣಕ್ಕೂ ವ್ಯಕ್ತಪಡಿಸಬಾರದು. ಎಲ್ಲರೂ ಅವರವರ ಮಟ್ಟಿಗೆ ಅವರು ಸರಿ ಅಂದುಕೊಂಡಿರುವುದರಿಂದ ಮತ್ತು ಪರಿವರ್ತನೆ ಅಸಾಧ್ಯ.

ಮನಸ್ಸು ನಿರ್ಮಲಗೊಳಿಸುವ ಪ್ರಯತ್ನದಲ್ಲಿ ಸಫಲತೆ ಕಾಣಲು ಒಮ್ಮೆ ಅತ್ತು ಬಿಟ್ಟರೆ ಸಾಕು !

ಗಂಭೀರವಾದ ಮೌನ ಮನಸ್ಸಿನಲ್ಲಿ ಪ್ರಶಾಂತತೆ ಉಂಟು ಮಾಡಿದರೆ ಒಂದು ದಿನದ ಉಪವಾಸ ಮನಸ್ಸಿಗೊಂದು ಸಂಕಲ್ಪವನ್ನು ತಂದುಕೊಡುತ್ತದೆ. ಕಣ್ಣಿನ ತುಂಬಾ ಮನ ಬಿಚ್ಚಿ ಒಮ್ಮೆ ಅತ್ತು ಬಿಟ್ಟರೆ ಅದರ ಖುಷಿಯೇ ಬೇರೆ. ಕಣ್ಣಿನ ಜೊತೆಗೆ ಮನಸ್ಸಿನ ಶುದ್ಧೀಕರಣವೂ ಆಗುತ್ತದೆ. ನಂತರದಲ್ಲಿ ಹೊಸ ಹೊಸ ಚಿಂತನೆಗಳು, ಆಸೆಗಳು ಹುಟ್ಟುತ್ತವೆ. ಅದಾವುದೋ ನಿರ್ಮಲವಾದ ಭಾವನೆ ಮನದಲ್ಲಿ ದೃಢಗೊಳ್ಳುತ್ತದೆ. ಹಗುರವೆನಿಸುವ ಭಕ್ತಿ ಪ್ರಧಾನ ಗೀತೆಗಳು ಜ್ಞಾಪಕಕ್ಕೆ ಬರುತ್ತವೆ. ರಾಮನ ಅವತಾರ. ರಘುಕುಲ ಸೋಮನ ಅವತಾರ ಎಂಬ ಇಡೀ ರಾಮಾಯಣದ ಪಾ...ತ್ರಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಮನಸ್ಸು ತಿಳಿಯಾಗುತ್ತಿದ್ದಂತೆ ಸಜ್ಜನರ ಸಹವಾಸ ಸದ್ಗುಣಗಳ ಅರಸುವಿಕೆಯ ಸ್ವರೂಪ ಜಾಗೃತವಾಗಿ ಉತ್ಕಟವಾಗುತ್ತದೆ. ಒಂದು ತಿಳಿ ಸುಖದ ಮಂಪರು ಆವರಿಸಿ ಹಾಯ್ ಎನಿಸುತ್ತದೆ. ಕಣ್ಣು ಮುಚ್ಚಿ ಪುಟ್ಟ ನಿದ್ರೆ ಮಾಡಬೇಕೆನಿಸುತ್ತದೆ. ಜೀವನದಲ್ಲಿ ಗಳಿಸಿದ್ದರ ಬಗ್ಗೆ, ಕಳೆದುಹೋದ ಸಮಯದ ಬಗ್ಗೆ, ಕಳೆದುಕೊಂಡ ವಿಶೇಷಗಳ ಬಗ್ಗೆ ಲೆಕ್ಕಾಚಾರ ನಡೆಯುತ್ತದೆ. ಮನಸ್ಸು ಇನ್ನಷ್ಟು ಬಲಿಷ್ಟವಾಗಿ ಬೆಳೆಯುತ್ತದೆ. ನನ್ನ ದೃಷ್ಟಿಯಲ್ಲಿ ಅಳು ಕೂಡ ಒಂದು ಸುಖ. ನನ್ನಂತಹ ಕೆಲವರಿಗೆ ಅಳಬೇಕು ಅನ್ನೋ ಹಂಬಲವಿದ್ದರೂ ಅಳು ಅನ್ನುವುದೇ ಬರದೆ ಸಾಕಷ್ಟು ಕೊರತೆ ಇದೆ ಎಂದೇ ಭಾಸವಾಗುತ್ತದೆ. ಯಾರಾದರು ಅಳುತ್ತಿದ್ದರೆ ನಾನು ಹತ್ತಿರ ಹೋಗಿ ಅಳ ಬೇಡಿ ಎಂದು ಸಮಾಧಾನದ ಮಾತುಗಳನ್ನು ಹೇಳಲು ಪ್ರಯತ್ನಿಸುವುದಿಲ್ಲ. ಸೂಕ್ಷ್ಮವಾಗಿ ಅವರ ಕಣ್ಣಿನಲ್ಲಿ ಒಮ್ಮೆ ಕಣ್ಣಿಟ್ಟು ಅತ್ತು ಬಿಡಿ ಪರವಾಗಿಲ್ಲ ಎಂಬ ಭಾವನೆ ಪ್ರಕಟಿಸಿರುತ್ತೇನೆ. ಅಳುವೂ ಕೂಡ ಒಂದು ಸ್ವಾತಂತ್ರ್ಯ. ಅಂದ ಹಾಗೆ ನಾವು ಅಳುತ್ತಲೇ ಈ ಭೂಮಿಗೆ ಬರುವುದಲ್ಲವೇ. ನಾವು ಭೂಮಿ ಬಿಟ್ಟ ಹೋದ ಸಂದರ್ಭದಲ್ಲಿಯೂ ಕೆಲವರು ಅಳುತ್ತಾರೆ ಅಲ್ಲವೇ ? ಅದೂ ಕಡಿಮೆಯಾಗಿ ಹೋಗಿದೆ ಎಂಬುದು ನನ್ನ ಸೂಕ್ಷ್ಮ ಅಂದಾಜು ! ದಿನ ಸಾಯುವವರಿಗೆ ಅಳುವವರು ಯಾರು ಅನ್ನೋ ಮಾತಿದೆ. ದಿನ ಸಾಯುವ ಮಂದಿ ನಾವೇ ಆಗಿದ್ದರೂ ಅಳು ಬರಿಸಿಕೊಳ್ಳುವ ಅದೃಷ್ಟವೂ ನಮಗಿರುವುದಿಲ್ಲ . ಅಳು ಎಂಬ ಅಮೃತ ಸಿಂಚನಕ್ಕೆ ಒಂದು ಪುಟ್ಟ ವಂದನೆ ನಗುವಿನಿಂದಲೇ ... ಸಂಪೂರ್ಣ ಖುಷಿಯಿಂದಲೇ...

ಭಾವನಾತ್ಮಕ ಸಂಬಂಧಗಳು...

ಒಂದು ವಿಷಯವನ್ನು ನಿಖರವಾಗಿ ತಿಳಿಯುವ ಮುನ್ನ ಅದರ ಬಗ್ಗೆ ಬರೆಯುವುದು ಬಹಳ ಕಷ್ಟ.ಊಹೆಗೆ ನಿಲುಕದ ಭಾವನೆಗಳ ಸಾಮ್ಯತೆಯನ್ನು ಎರಡು ಜೀವಗಳು ಸಮಾನವಾಗಿ ಹೊಂದಿ ಏರ್ಪಡಿಸಿಕೊಳ್ಳುವ ಅತ್ಯಂತ ಅಪರೂಪದ ಸಂಬಂಧಗಳು ಭಾವನಾತ್ಮಕ ಸಂಬಂಧಗಳು ಎನಿಸಿಕೊಳ್ಳುತ್ತವೆ.ಅಲ್ಲಿ ಪರಸ್ಪರ ಪ್ರೀತಿ,ಸಮರ್ಪಣಾ ಮನೋಭಾವ,ಆರಾಧನಾ ಮನೋಭಾವ ಮತ್ತು ಸ್ವಾಸ್ಥ್ಯತೆಯ ಉತ್ತುಂಗ ನಿರ್ಮಲ ಮನದ ಪೂಜ್ಯತೆಯಲ್ಲಿ ನಿರತವಾಗುತ್ತದೆ.


ಅಪ್ಪಟವಾದ ಆತ್ಮ ಬಂಧುತ್ವ ಭಾವನಾತ್ಮಕ ಸಂಬಂಧಗಳ ಜೀವಾಳ.ಎಂದೂ ಕಾಣದ ಎಷ್ಟೋ ದೂರದ ವ್ಯಕ್ತಿಗಳಲ್ಲಿ ಕೂಡ ಇಂತಹ ವಿಶೇಷ ಸಂಬಂಧ ಬೆಳೆಯುವುದು ಮಾತ್ರ ಇಲ್ಲಿ ಆಶ್ಚರ್ಯ ಹುಟ್ಟಿಸ...ಿದರೂ ಪಾರಮಾರ್ಥಿಕ ಭರವಸೆಯ ತಳಹದಿ ಮೂಲವಾಗಿರುತ್ತದೆ.ಇಲ್ಲಿ ಸಾಮಾಜಿಕವಾಗಿ ಗುರುತಿಸಲ್ಪಡುವ ಹೆಸರಿಸ ಬಹುದಾದ ಎಲ್ಲಾ ಸಂಬಂಧಗಳನ್ನು ಮೀರಿದ ಬಂಧುತ್ವ ಏರ್ಪಟ್ಟಿರುತ್ತದೆ.ಅಪ್ಪ ಅಮ್ಮ ಅಣ್ಣ ತಂಗಿ ಸ್ನೇಹಿತ ಸ್ನೇಹಿತೆ ಪ್ರಿಯತಮೆ ಪ್ರಿಯಕರ ಹೀಗೆ ಯಾವುದಕ್ಕೂ ಸೇರದ ಆದರೆ ಎಲ್ಲವನ್ನೂ ಒಟ್ಟಾರೆ ಹೊಂದಿದ ಅನುಬಂಧವೇ ಪ್ರಧಾನ್ಯತೆ ಪಡೆಯುತ್ತದೆ.ಜೀವಗಳ ಭಾವ ಸೆಳೆತ ಭಾವನೆಗಳ ಜೀವ ಸೆಳೆತ.


ಭಾವನಾತ್ಮಕ ಸಂಬಂಧಗಳಲ್ಲಿ ಎರಡು ಜೀವಗಳ ನಡುವಿನ ಆಸ್ತಿ,ಅಂತಸ್ತು,ಹುದ್ದೆ,ಉದ್ಯೋಗ,ಜನಪ್ರಿಯತೆ, ಜನಪರತೆ ಮುಖ್ಯವೆನಿಸಿಕೊಳ್ಳುವುದಿಲ್ಲ.ಜೀವಗಳ ಯಾವುದೋ ಅಗೋಚರ ವಿಶೇಷ ಇಂದ್ರಿಯಗಳ ಪರಸ್ಪರ ಸ್ಪಂದನೆ ಮತ್ತು ತುಡಿತ ಮಾತ್ರ ಬಹಳ ಎತ್ತರದಲ್ಲಿ ಅಸ್ತಿತ್ವ ಕಾಪಾಡಿಕೊಂಡಿರುತ್ತದೆ. ಅತಿಯಾದ ಅಭಿಮಾನ,ತುಂಬಾ ಸಲುಗೆ,ಚೂರೇ ಚೂರು ಮುನಿಸು,ಸಂಬಂಧವೇ ಬೇಡ ಎಂದುಕೊಂಡರೂ ಮರುಪ್ರೀತಿಯದೇ ಮೇಲುಗೈ.
ಜೀವಗಳು ಮಣ್ಣಾಗಿ ಹೋಗುವ ತನಕ ಅಥವ ವ್ಯಕ್ತಿಯ ಕಡೆಯ ಉಸಿರಿರುವ ತನಕ ಭಾವನಾತ್ಮಕ ಸಂಬಂಧಗಳು ತನ್ನದೇ ಮಜಲುಗಳ ಸಾಮಾನ್ಯ ಓಟ ಕಾದಿರಿಸಿಕೊಂಡಿರುತ್ತದೆ. ಒಂದು ಸೆಳೆತ ಒಂದು ಸನಿಹತೆ ಒಂದು ಸಂತೃಪ್ತಿ ಒಂದು ಸಂತುಷ್ಟಿ. ಇಂತಹ ಭಾವನಾತ್ಮಕ ಸಂಬಂಧಗಳು ಎಲ್ಲರಲ್ಲೂ ಇರುತ್ತದಾ? ಖಂಡಿತಾ ಇರುವುದಿಲ್ಲ.ಅನೇಕರ ಮೇಲೆ ಒಬ್ಬರಿಗೆ ಇರುತ್ತದಾ? ನಿಸ್ಸಂದೇಹವಾಗಿ ಇಲ್ಲ.ಬಹು ಅಪರೂಪದ ಇಡೀ ಜೀವಮಾನದಲ್ಲಿ ಒಂದೋ ಎರಡೋ ವ್ಯಕ್ತಿಗಳ ನಡುವೆ ಮಾತ್ರ ಇದು ಕಂಡು ಬರುತ್ತದೆ.ನಿಧಾನವಾಗಿ ಅರ್ಥವಾಗುತ್ತದೆ.ಆತ್ಮ ಸಾಕ್ಷಾತ್ಕಾರದ ಪರಿಧಿ.ಮನುಸಂಕುಲ ಪ್ರೀತಿಯ ಅಂತಃಕರಣ.ವ್ಯಾಪ್ತಿಯ ಮೀರಿದ ಪ್ರಭಾವಳಿ ಪ್ರೇರಕ ಶಕ್ತಿಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತದೆ.ಭಾವನಾತ್ಮಕ ಸಂಬಂಧಗಳಿಗೆ ಪ್ರೀತಿಯ ನಮನ.

ಬಾಡಿ ಹೋಗುವ ಬದುಕು...

ಪುಟ್ಟ ಮೊಗ್ಗು, ಘಮ ಘಮ ಹೂವು,ಘಮವೆಲ್ಲಾ ಇಂಗಿ ಬಾಡಿ ಹೋಗುವ ಹಾಗಲ್ಲವೇ ನಮ್ಮ ಬದುಕು.ಬದುಕಿನ ದಾರಿಯಲಿ ಸಂಗಾತಿಗಳು,ಸಂಸಾರಗಳು,ಪೀಳಿಗೆಗಳು ಮತ್ತೆ ವಸಂತ.ಹೊಸ ಜನ್ಮ,ಜೀವನಾ ಸಂಜೀವನಾ.ಜೀವಿಸುತ್ತಾ ಜೀವನ್ಮರಣ.ಪುನರ್ಜನ್ಮ.ಇನ್ನು ನಾನು ನೀವು ಎಂಬ ಅಸ್ತಿತ್ವಗಳು!!! ಉಸಿರಾಡುವ ತನಕ...ಉಸಿರಿದ್ದರೂ ಹಸಿವಿರುವ ತನಕ...ಹಸಿವಿದ್ದರೂ ನೀಗಿಸುವ ಶಕ್ತಿಯಿರುವ ತನಕ, ಶಕ್ತಿಯಿದ್ದರೂ ಕುಂದುವ ತನಕ..
ಕುಂದಿದರೂ ಕಮರುವ ತನಕ.ಒಟ್ಟಾರೆ ಹಿಂಡಿ ಹಿಪ್ಪೆ ಮಾಡಿ ಎಕ್ಕಾ ಮಕ್ಕಾ ಒದ್ದು ಹಣ್ಣುಗಾಯಿ ಈಡುಗಾಯಿಗಳಾಗಿ ಹೋಗುವ ಖಚಿತತೆ ಮಾತ್ರ ನಿಸ್ಸಂದೇಹ....


ನಿಮಗೆ ಆಲೆಮನೆ ನೆನಪಿದೆಯೇ? ಗಾಣದೆತ್ತುಗಳು? ಕುದಿಯುತ್ತಿರುವ ಬೆಲ್ಲದ ಪಾಕದಲ್ಲಿ ಅದ್ದಿ ತೆಗೆದ ಕಬ್ಬಿನ ತುಂಡು.ಕುದಿಯುವ ಬೆಲ್ಲದ ಪಾಕದಲ್ಲಿ ಹಾಕಿ ತೆಗೆದ ಒಣಕೊಬ್ಬರಿ ಅಥವಾ ನೀರು ಮಾತ್ರ ಖಾಲಿ ಮಾಡಿ ಪಾಕದಲ್ಲಿ ಹಾಕಿ ತೆಗೆದ ಹಸಿ ಕಾಯಿಯ ಪೂರ್ಣ ಹೋಳು, ಕೆಂಡದಲ್ಲಿ ಸುಟ್ಟ ಹಲಸಿನ ಕಾಯಿ ಬೀಜದ ರುಚಿ,ಸುಟ್ಟ ಗೆಣಸಿನ ಸವಿರುಚಿ,ಕಾದ ಕೆಂಡದಲ್ಲಿ ಸುಟ್ಟ ಬದನೇಕಾಯಿ ಬಳಸಿ ಒಗ್ಗರಣೆ ಹಾಕಿ ಮಾಡಿದ ಉಪ್ಪು ಸಾರು.ಇದೆಲ್ಲಾ ಇಂದಿನ ಪೀಳಿಗೆಗೆ ತಿಳಿದಿಲ್ಲ.ಬದುಕು ಸುಂದರವಾಗಿದೆಯೇ ಸುಂದರವಾಗಿತ್ತೇ ಸುಂದರವಾಗುತ್ತದೆಯೇ???
ನಮ್ಮ ತಾತಾ ಮುತ್ತಾತಂದಿರ ತಾಕತ್ತು ನಮ್ಮ ಅಪ್ಪನ ತಲೆಮಾರಿಗೆ,ಅವರ ತಾಕತ್ತು ನಮ್ಮ ತಲೆಮಾರಿಗೆ ನಮ್ಮ ತಾಕತ್ತು ಮುಂದಿನ ತಲೆಮಾರಿಗೆ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ ಯಾವುದೋ ಸ್ವೇಚ್ಛಾಚಾರದ ಮಾಯಲೋಕವೆಂಬ ಹುರುಪು ಪುನಃ ಕಾಲಚಕ್ರದಲ್ಲಿ ಕಾಣುವ ಕ್ಷೀಣತೆ.ನಿನ್ನೆ ಸಿರೂರು ಪಾರ್ಕಿನ ಮೂಲೆಯಲ್ಲಿ ಕಂಡ ಚುರುಮುರಿ ಗಾಡಿಗೆ ಹೋಗಿದ್ದೆ ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿ ಗಾಡಿ ಇಟ್ಟುಕೊಳ್ಳುತ್ತಿದ್ದ ವ್ಯಕ್ತಿಯ ಹಾಗೆ ಹೋಲಿಕೆ ಇದ್ದ ವ್ಯಕ್ತಿ. ಗಾಡಿಯ ಮೂಲೆಯಲ್ಲಿ ಅವರಪ್ಪನ ಪುಟ್ಟ ಫೋಟೋ ಅದಕ್ಕೊಂದು ಹೂವು.ಅದೂ ಬಾಡಿತ್ತು

ನನ್ನ ದಿನವನ್ನು ಶುಭ್ರವಾಗಿ ಆರಂಭಿಸಲು ಕಾರಣವಾದ ಚೆನ್ನೈ ಕನ್ನಡ ಬಳಗದ ಮಿತ್ರ ಪಾವಂಜೆ ರಾಘವೇಂದ್ರ ಭಟ್ಟರ ಎರಡು ಮಾತು..

ನನ್ನ ದಿನವನ್ನು ಶುಭ್ರವಾಗಿ ಆರಂಭಿಸಲು ಕಾರಣವಾದ ಚೆನ್ನೈ ಕನ್ನಡ ಬಳಗದ ಮಿತ್ರ ಪಾವಂಜೆ ರಾಘವೇಂದ್ರ ಭಟ್ಟರ ಎರಡು ಮಾತು..


‘ಕನ್ನಡ ಬಳಗ’ದ ವೇದಿಕೆಯಲ್ಲಿ ದಿನಕ್ಕೊ೦ದು ಪ್ರಬ೦ಧಗಳನ್ನು ಮ೦ಡಿಸುತ್ತಿರುವ ಸಿ.ಎನ್.ರಮೇಶ್ ಅವರ ಬರವಣಿಗೆಯ ಬದ್ಧತೆಯನ್ನು ಮೆಚ್ಚತಕ್ಕದ್ದೆ. ರಮೇಶ್ ಅವರು ತಮ್ಮ ದೈನ೦ದಿನ ಬದುಕು, ಸುತ್ತಮುತ್ತಲಿನ ಆಗುಹೋಗುಗಳನ್ನು-ಅನುಭವಗಳನ್ನು ವಿಶ್ಲೇಷಿಸಿ ಅದನ್ನು ಪ್ರಸ್ತುತಪಡಿಸುವ ಅವರ ಭಾಷೆಯ ಅಚ್ಚುಕಟ್ಟುತನ, ನಾನಾ ವ್ಯಕ್ತಿ ಹಾಗೂ ವ್ಯಕ್ತಿತ್ವಗಳ ಒಡನಾಟದೊ೦ದಿಗೆ ತಮ್ಮ ಅನುಭೂತಿಗಳನ್ನು ಸ೦ಭ್ರಮಿಸುವ ರೀತಿ ಹಾಗೂ ವಾಸ್ತವಿಕ ಸ೦ಗತಿಗಳ ಚಿ೦ತನೆಯ ಪ್ರಕ್ರಿಯೆಯಲ್ಲಿನ ಅವರ ಒಳನೋಟಗಳನ್ನು ಗಮನಿಸುತ್ತಾ ಹೋದಾಗ ಅವರ ಭಾಷಾದರ ಮತ್ತು ಬರವಣಿಗೆಯ ತುಡಿತ-ಮಿಡಿತಗಳ ವಿನ್ಯಾಸ ಎದ್ದು ಕಾಣುತ್ತದೆ.


ಯಾವುದೇ ಬರಹಗಾರನಿಗಾಗಲಿ ಇಲ್ಲಾ ಕಲಾವಿದನಿಗಾಗಲಿ ಆಯಾ ಆಯಾಮಗಳಲ್ಲಿ ಬದ್ಧತೆ ಮತ್ತು ನಿರ೦ತರತೆ ಇರಲೇಬೇಕು. ಈ ಎರಡು ಅ೦ಶಗಳನ್ನು ಆತ ಕಾಯ್ದುಕೊ೦ಡು ಬ೦ದಲ್ಲಿ, ಆತ ನಡೆದುಬ೦ದ ಹೆಜ್ಜೆಗಳು ಆತನನ್ನು ಹೆದ್ದಾರಿಯತ್ತ ಕೊ೦ಡೊಯ್ಯುವುದರಲ್ಲಿ ಯಾವ ಸ೦ದೇಹವೂ ಇಲ್ಲ. ನಮ್ಮ ಬದುಕಿನ ಅ೦ದರೆ ಮುಖ್ಯವಾಗಿ ವೃತ್ತಿ ಬದುಕಿನ ಸ೦ಘರ್ಷದಲ್ಲಿ ನಾವು ನಮ್ಮನ್ನು-ನಮ್ಮತನವನ್ನು ಕಳೆದುಕೊ೦ಡುಬಿಡುವುದು ಅದೊ೦ದು ದೊಡ್ಡ... ದುರ೦ತ! ಬದ್ಧತೆ ಮತ್ತು ನಿರ೦ತರತೆಯನ್ನು ಕಳೆದುಕೊಳ್ಳುವ-ಕಾಯ್ದುಕೊಳ್ಳಲಾಗದ ಸೃಜನಶೀಲ ಅದಕ್ಕೆ ಪರ್ಯಾಯವಾಗಿ ಕೊನೆಗೆ ಪರಿತಾಪವನ್ನು ಪಾಲಿಸಬೇಕಾಗುತ್ತದೆ. ಒ೦ದು ಹ೦ತದಲ್ಲಿ ನನ್ನ ವಿಷಯದಲ್ಲೂ ಅಗಿದ್ದು ಇದೇನೇ! ನನ್ನ ಈ ತನಕ ಪ್ರಕಟಗೊ೦ಡಿರುವ ನಾಲ್ಕು ಪುಸ್ತಕಗಳನ್ನು ಹಾಗೂ ನನ್ನ ಇತರ ಬರವಣಿಗೆಗಳನ್ನು ‘ವಿವಾಹಪೂರ್ವ’ ಮತ್ತು ‘ವಿವಾಹೋತ್ತರ’ ಸಾಹಿತ್ಯ ಅ೦ಥ ಎರಡು ವಿಭಾಗವಾಗಿ ಪ್ರತ್ಯೇಕಿಸಿದರೆ ಮೊದಲನೆಯದು ಎಪ್ಪತ್ತೈದು ಪ್ರತಿಶತ, ನ೦ತರದ್ದು ಬರೀ ಇಪ್ಪತ್ತೈದು ಪ್ರತಿಶತ. ವೃತ್ತಿ ಹಾಗೂ ಕೌಟು೦ಬಿಕ ಬದುಕು ಅ೦ಥ ನಮಗೆ ನಾವೇ ಅನೂರ್ಚಿತವಾಗಿ ಲಕ್ಷ್ಮಣರೇಖೆಯನ್ನು ಹಾಕಿಕೊ೦ಡು ಬಿಡುತ್ತೇವೆ. ಅದೊ೦ದು ‘ಸ೦ಭ್ರಮ’ ಅನ್ನೋ ಪರಿಕಲ್ಪನೆ ಮಾಡಬೇಕಾದ ಔಚಿತ್ಯವನ್ನು ಮರೆತು ‘ಸ೦ಘರ್ಷ’ ಅನ್ನುವ ಕಟ್ಟುಪಾಡುಗಳಿಗೆ ಯಾ೦ತ್ರಿಕವಾಗಿ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ.


ಹೈಸ್ಕೂಲು ದಿನಗಳಲ್ಲಿ (೧೯೮೩-೮೪ ಇರಬೇಕು) ಮೊಟ್ಟಮೊದಲ ಬಾರಿಗೆ ತುಷಾರ-ಮಯೂರಗಳಲ್ಲಿ ನನ್ನ ಮೊಟ್ಟ ಮೊದಲ ಕವಿತೆಗಳು ಪ್ರಕಟಗೊ೦ಡಾಗ.. ಸರಿಸುಮಾರು ಅದೇ ಹೊತ್ತಿಗೆ ನನ್ನ ಕೃತಿಯೂ ಇದ್ದ ವಿವಿಧ ಕವಿಗಳ ಕವನಸ೦ಕಲನ ಬಿಡುಗಡೆ ಸಮಾರ೦ಭ ಪಾಟೀಲ ಪುಟ್ಟಪ್ಪರ ಸಮಕ್ಷಮದಲ್ಲಿ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ನಲ್ಲಿ ನಡೆದಾಗ ಪಾಲ್ಗೊ೦ಡ ನೆನಪುಗಳು... ಇವೆಲ್ಲಾ ಬರವಣಿಗೆಗೆ ತೊಡಗಿಕೊ೦ಡ ಆ ಕಾಲದಲ್ಲಿ ಮಿಲಿಯನ್ ಡಾಲರ್ ಮೌಲ್ಯವುಳ್ಳ ಸ೦ಭ್ರಮವನ್ನು ತ೦ದುಕೊಟ್ಟಿದೆ ಅನ್ನುವುದನ್ನು ಈಗಲೂ ತಳ್ಳಿ ಹಾಕುವ೦ತಿಲ್ಲ. ಕಾರ್ಪೊರೇಟ್ ವಲಯಕ್ಕೆ ಬರುವುದಕ್ಕೆ ಮು೦ಚೆ ಭಾರತೀಯ ವಾಯುಸೇನೆಯಲ್ಲಿ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಾನು ನನ್ನ ಎರಡನೆಯ ಕವನಸ೦ಕಲನ ‘ಚೈತ್ರ ಸುನ೦ದ’ವನ್ನು ‘ಭಾರತೀಯ ವಾಯುಸೇನೆ’ಗೆ ಅರ್ಪಣೆ ಅನ್ನೋ ಶರಾ ಬರೆದಿದ್ದರೂ ಎಪ್ಪತ್ತಕ್ಕೂ ಹೆಚ್ಚು ಕವಿತೆಗಳಿರುವ ಈ ಕವನ ಸ೦ಕಲನದಲ್ಲಿ ವಾಯುಸೇನೆಯ ಬಗ್ಗೆ ನಾನು ಬರೆದಿರುವುದು ಒ೦ದೇ ಒ೦ದು ಕವನ ಅನ್ನೋದು ದೊಡ್ಡ ವಿಪರ್ಯಾಸ ಮತ್ತು ಅಕ್ಷಮ್ಯ! ನಾವು ನಮ್ಮ ಸುತ್ತಮುತ್ತಲಿನ ಬದುಕು-ಬವಣೆ-ವಿಜೃ೦ಭಣೆ-ವೈರುಧ್ಯಗಳನ್ನು ಬರೀ ಅನುಭವಿಸುತ್ತೇವೆ ಆದರೆ ಅದನ್ನು ಸೂಕ್ತ ರೀತಿಯಲ್ಲಿ ದಾಖಲಿಸುವುದಿಲ್ಲ. ಈ ತಪ್ಪುಗಳನ್ನು ಹೆಜ್ಜೆ-ಹೆಜ್ಜೆಗೂ ‘ರಿಪೀಟ್’ ಮಾಡುತ್ತಾ ಹೋಗುವುದು ಒಬ್ಬ ಬರಹಗಾರನಿಗೆ ಶೋಭೆ ತರುವ ವಿಷಯವ೦ತೂ ಅಲ್ಲ. ಭಾಗಶಃ ಆ ಹ೦ತವನ್ನು ಮಾರ್ಪಡಿಸಿ ಮತ್ತೆ ಬರವಣಿಗೆಯತ್ತ ಮುಖ ಮಾಡುವ ಮೂಲಕ ಮತ್ತೆ ನಾನು ಸೃಜನಶೀಲತೆಗೆ ಮರಳುವ ಕೆಲಸವನ್ನು ಕಳೆದ ಎರಡುವರ್ಷಗಳಿ೦ದ ಮಾಡುತ್ತಿದ್ದೇನೆ. ಒ೦ದು ಘಟ್ಟದಲ್ಲಿ ತಟಸ್ಥವಾಗಿ ಹೋಗಿದ್ದ (ಮತ್ತೆ ಅದೇ ವೃತ್ತಿ ಮತ್ತು ಕೌಟು೦ಬಿಕ ಬದುಕಿನ ನಾವು ನಾವಾಗಿಯೇ ವಿಧಿಸಿಕೊ೦ಡಿರುವ ವಿಧಿಸಿಕೊಳ್ಳಬಾರದ ಕಟ್ಟುಪಾಡುಗಳಲ್ಲಿ!) ನನ್ನೊಳಗಿನ ನನ್ನ ಇತರ ಮಿಡಿತಗಳಾದ ಸುಗಮಸ೦ಗೀತ, ಶಾಸ್ತ್ರಿಯ ಗಾಯನ ಮತ್ತು ಯಕ್ಷಗಾನಗಳ ಜೀವ೦ತಿಕೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ಕ್ರಿಯೆಯಲ್ಲಿ ತೊಡಗಿದ್ದೇನೆ. ಇರಲಿ...


ರಮೇಶ್, ನಿಮ್ಮ ಬರವಣಿಗೆ ಇದೇ ರೀತಿ ಮು೦ದುವರಿಯುತ್ತಿರಲಿ; ನಿಮ್ಮಲ್ಲಿರುವ ಸೃಜನಶೀಲತೆ, ವೈಚಾರಿಕತೆಯ ಸೆಲೆ, ಬಳಗದ ವೇದಿಕೆಯಲ್ಲಿ ‘ಅ೦ಕಣಧರ್ಮ’ವನ್ನು ಪಾಲಿಸುತ್ತಿರುವ ತಮ್ಮ ಪ್ರಯತ್ನ ಹೀಗೆಯೇ ಸಾಗುತ್ತಿರಲಿ...

ಅಸಂತುಷ್ಟ ಗುಪ್ತ ಕಾಮ -ಒಂದು ವಿವೇಚನೆ

ಆಕೆ ಒಬ್ಬ ಸದ್ಗೃಹಿಣಿ. ಸೂಕ್ಷ್ಮ ಮನಸ್ಸಿನ ಬುದ್ದಿವಂತೆ. ತಾವು, ತಮ್ಮ ಮಗ ಮತ್ತು ತಮ್ಮ ಪತಿ ಎಂದರೆ ಸುಂದರ ಪ್ರಪಂಚ. ಬದಲಾಗುತ್ತಿರುವ ದಿನಗಳ ಶೋಷಣೆಯಿಂದ ಬದುಕಿನ ಬಗ್ಗೆ ನಿಜಕ್ಕೂ ಭಯ ಪಡುತ್ತಾರೆ. ಹೈಸ್ಕೂಲು ಓದುತ್ತಿರುವ ಅವರ ಮಗನ ಸ್ನೇಹಿತರು " ಹಾಯ್ ಆಂಟಿ " ಎಂದು ಕರೆಯುವ ಶ್ಯಲಿಯಲ್ಲಿಯೇ ಆ ಹುಡುಗರ ಮನಸ್ಸಿನಲ್ಲಿ ಏನಿದೆ ಎಂದು ಅವರಿಗೆ ತಿಳಿದಿದೆ. ತಾವು ಕೆಲಸ ಮಾಡಿದ ಹಳೆಯ ಕಂಪನಿಯ ಆಫೀಸ್ ಬಾಯ್ ರಸ್ತೆಯಲ್ಲಿ ಅಕಸ್ಮಾತ್ ಸಿಕ್ಕು ತಮ್ಮ ಮೊಬೈಲ್ ನಂಬರ್ ಕೇಳಿದಾಗ ಕೊಟ್ಟರೆ ಆ ಹುಡುಗನೂ ಕೂಡ ಬೇರೆ ಬೇರೆ ನಂಬರ್ನಿಂದ ಕರೆ ಮಾಡಿ ತಲೆ ಕೆಡಿಸುತ್ತಾನೆ. ಅವರು ಬೇಸರ ಪಡುತ್ತಾರೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂಬುದು ಅವರ ಮನಸ್ಸಿಗೆ ನೋವುಂಟು ಮಾಡಿದೆ. ಏನಾಗುತ್ತಿದೆ ಈ ಪ್ರಪಂಚ ?


ಮೆಜೆಸ್ಟಿಕ್ ಬಸ್ ಸ್ಟ್ಯಾಂಡಿನಿಂದ ಅಂಡರ್ ಪಾಸ್ ದಾಟಿ ರೈಲು ನಿಲ್ದಾಣದ ಕಡೆಗೆ ನಡೆದಾಗ ಅಲ್ಲೊಬ್ಬ ತಾಯಿಯ ವಯಸ್ಸಿನ ಹೆಣ್ಣು ಮತ್ತು ಮಗನ ವಯಸ್ಸಿನ ಗಂಡು. ಅಲ್ಲಿ ನಡೆಯುತ್ತಿರುವುದು ಮೈ ಮಾರಿಕೊಳ್ಳುವ ಹೆಣ್ಣಿನ ವ್ಯಾಪಾರ ಕುದುರಿಸುತ್ತಿರುವ ದೃಶ್ಯ. ಆ ಹುಡುಗ ಕೆಟ್ಟ ಭಾಷೆಯಲ್ಲಿ ಆ ಹೆಣ್ಣನ್ನು ಒಂದು ಅತೀ ಕೆಟ್ಟ ಪದದಿಂದ ಮಾತನಾಡಿಸುತ್ತಾನೆ. ಅದಕ್ಕೆ ಅವಳು ಆ ಪದ ಮಾತ್ರ ಬಳಸಬೇಡ ನನ್ನ ಗಂಡ ಇನ್ನೂ ಬದುಕಿದ್ದಾನೆ ಅನ್ನುತ್ತಾಳೆ. ಅಜ್ಜಿಯ ವಯಸ್ಸಿನ ಮುದುಕಿಯೊಬ್ಬಳು ಮಧ್ಯೆ ಸಮಾಧಾನ ಮಾಡುವವಳಂತೆ ಬಂದು ವ್ಯಾಪಾರ ಕುದುರಿಸಲು ನೆರವಾಗುತ್ತಾಳೆ. ಅಲ್ಲಿ ಮಗಳು, ತಾಯಿ, ಅಜ್ಜಿ ....ಎಲ್ಲರೂ ಒಂದೇ ಕುಲ ಕಸುಬನ್ನು ನಡೆಸುವವರೇ....
ಆಗಾಗ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಒಬ್ಬ ಮನುಷ್ಯ . ತನ್ನ ಹೆಂಡತಿ ಗರ್ಭಿಣಿಯಾದ ಮೇಲೆ ಮನೆಯ ಸಹಾಯಕ್ಕೆ ಹದಿನಾಲ್ಕು ವರ್ಷದ ಕೊಡಗಿನ ಹುಡುಗಿಯನ್ನು ಮನೆ ಕೆಲಸಕ್ಕೆ ಕರೆಸಿಕೊಂಡು ಅವಳನ್ನು ಗುಪ್ತವಾಗಿ ಬಲಾತ್ಕರಿಸುತ್ತಾನೆ.
ನಾನು ಬರೆದಿರುವ ವಿಚಾರಗಳು ಒಂದು ಚಲನಚಿತ್ರದ ಕಥೆಯಲ್ಲ ... ದೂರದರ್ಶನದಲ್ಲಿ ಬಿತ್ತರವಾಗುವ ಕಲ್ಪನೆಯ ಚಿತ್ರಣವೂ ಅಲ್ಲ...


ಇನ್ನು ಚಲನಚಿತ್ರಕ್ಕೆಬಂದರೆ ಒಂದು ಚಿತ್ರದಲ್ಲಿ ನಾಯಕಿ ಒಬ್ಬ ಖಳ ನಟನ ಬಗ್ಗೆ " ಲೋ ನಿಮ್ಮಪ್ಪ... ನಿಮ್ಮಮ್ಮನ ಜೊತೆ ಮಲಗದೇ ಹೋಗಿದ್ದರೆ ನೀನು ಈ ಭೂಮಿಯ ಮೇಲೆ ಹುಟ್ಟುತ್ತಿರಲೇ ಇಲ್ಲ " ಎನ್ನುವ ಮಾತಿನ ಸಂಭಾಷಣೆ. ಇಂತಹ ಮಾತುಗಳು ಚಲನಚಿತ್ರ ನೋಡುವ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ? ನಾವು ಹುಡುಗರಿದ್ದಾಗ ನಾವು ಸಿನಿಮಾದಲ್ಲಿ ನೋಡಿದ ಮಾತುಗಳನ್ನು ಅದೇ ಶ್ಯಲಿಯಲ್ಲಿ ಹೇಳುತಿದ್ದೆವು. ಇನ್ನು ಈ ರೀತಿಯ ಸಂಭಾಷಣೆ !!! ಇನ್ನು ಮೆಜೆಸ್ಟಿಕ್ನಲ್ಲಿ ಮೈ ಮಾರಿಕೊಳ್ಳುವವರ ಕಥೆ .. ಹೆಚ್ಚುತ್ತಿರುವ ಅಕ್ರಮ ಸಂಬಂಧಗಳು, ಸಮಾಜದ ಸವಾಲುಗಳು ... ನಮ್ಮ ಜವಾಬ್ದಾರಿ .. !!!ನಮಗೇಕೆ ಪರರ ಚಿಂತೆ - ತನ್ನ ತನುವ ಸಂತೈಸಿಕೋ, ತನ್ನ ಮನವ ಸಂತೈಸಿಕೋ ನೆರೆ ಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲ ಸಂಗಮದೇವ ಎನ್ನುವ ಮಾತು ಬಹಳ ಸೂಕ್ಷ್ಮವಾಗುತ್ತದೆ. ಕಾಮ ಮತ್ತು ಕಾಂಚಾಣ ಕಲಿಯುಗ ಅಂತ್ಯವಾಗುವ ಸುನಾಮಿಗಳು...


ನನಗಿನ್ನೂ ಚೆನ್ನಾಗಿ ನೆನಪಿದೆ ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ನಮ್ಮ ಸಂಬಂಧಿಕರೊಬ್ಬರು ನಮಗೆ ಕಾಮ ಪ್ರಚೋದನೆಯ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದರು. ತಾನೊಬ್ಬ ಮಹಾನ್ ಪಂಡಿತ ಎಂಬ ಸ್ವ-ಪ್ರಶಂಶೆ ಮನುಷ್ಯ . ತಾನೊಬ್ಬನೇ ಗಂಡು ಎನ್ನುವಂತೆ ಮಾಡಿದ ಕಚಡಾ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಕುಡಿತದ ದಾಸನೂ ಆದರು. ನನ್ನ ಮನಸ್ಸಿನಿಂದ ಅವರ ವಿಚಾರಗಳನ್ನು ಕಂಟ್ರೋಲ್ ಆಲ್ಟ್ ಡಿಲೀಟ್ ಮಾಡದೇ ಹೋಗಿದ್ದರೆ ???
ಕಾಮ ಎಂದರೇನು ಎಂದು ತಿಳಿಯದ ಆ ವಯಸ್ಸಿನಲ್ಲಿ ಹಾಸ್ಯ ನಟ ಸ್ನೇಹಿತನೊಬ್ಬನ ಊರಿನಲ್ಲಿ ನಡೆದ ಘಟನೆ ಒಬ್ಬ ವ್ಯಕ್ತಿ ತನ್ನ ಮಗಳನ್ನೇ ಮದುವೆಯಾಗಿ ಅವರಿಗೊಂದು ಮಗುವಿತ್ತು. ಆ ವ್ಯಕ್ತಿ ಆ ಮಗುವಿನ ತಂದೆಯೂ ಹೌದು ತಾತನೂ ಹೌದು. ತಾತ ಅಂದರೆ ಹಳಗನ್ನಡದಲ್ಲಿ ತಂದೆ ಎಂದೇ ಅರ್ಥ ಅಂತ ಕೇಳಿದ ನೆನಪು. ನಾವು ಅಮಾಯಕರೆನಲ್ಲ ಎಲ್ಲ ವಿಷಯಗಳು ನಮಗೆ ತಿಳಿದಿದ್ದರೂ ನಮ್ಮ ವಿವೇಚನೆ ಸರಿಯಾಗಿತ್ತು ಹಾಗೆ ನಮ್ಮ ಜನರೇಶನ್ ಬಚಾವ್.


ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಸ್ವಲ್ಪ ಅರಿವು ಮೂಡಿಸುವ ಕೆಲಸ ಪ್ರತಿ ಮನೆಯಲ್ಲೂ ನಡೆಯಬೇಕು. ಸ್ವಾಸ್ಥ್ಯ ಸಮಾಜಕ್ಕೆ ನಮ್ಮ ಮಕ್ಕಳನ್ನು ಸಿದ್ದಗೊಳಿಸಬೇಕು. ಅಸಂತುಷ್ಟ ಗುಪ್ತ ಕಾಮ ಪ್ರತಿ ವ್ಯಕ್ತಿಯ ಸಹಜತೆ. ನಮ್ಮ ಹುಟ್ಟು - ನಮ್ಮ ಪೀಳಿಗೆಯ ಹುಟ್ಟು - ಮುಂದಿನ ಪೀಳಿಗೆಯ ಹುಟ್ಟು ಎಲ್ಲ ಸೃಷ್ಟಿ ಬಗೆಗಿನ ವಿಚಾರವೇ ಕಾಮ. ನಮ್ಮ ಹುಟ್ಟಿಗೆ ಕಾರಣವಾದ ಕಾಮ ನಮ್ಮ ಸಾವಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತದೆ. ಗಂಡು ಹೆಣ್ಣು ಪರಸ್ಪರ ಆಕರ್ಷಿತರಾಗಿ ಕಾಮ ಪ್ರಚೋದನೆ ಸಹಜವಾದರೂ ತಾಯಿ.. ಚಿಕ್ಕಮ್ಮ ... ದೊಡ್ಡಮ್ಮ ... ಅಕ್ಕ ... ತಂಗಿ ... ಅತ್ತೆ .... ಅತ್ತಿಗೆ ... ಅಪ್ಪ .. ಚಿಕ್ಕಪ್ಪ ... ದೊಡ್ಡಪ್ಪ ... ಭಾವ .. ಮೈದುನ ... ಮಾವ ಹೀಗೆ ಬಾಂಧವ್ಯಗಳಿಗೆ ಅರ್ಥವಿರಬೇಕು. ಅವುಗಳಿಗೆ ನ್ಯಾಯ ಒದಗಬೇಕು. ಪ್ರಖ್ಯಾತ ನಟರೊಬ್ಬರ ಅನಧಿಕೃತ ಮಗ ಆತ .. ಪ್ರಖ್ಯಾತ ರಾಜಕಾರಣಿಗಳ ಮಗಳು ಆಕೆ ... ಯಾರದೋ ಬದುಕಿನ ಖಾಸಗಿ ಸಂಬಂಧ ... ತಮಿಳು ಚಿತ್ರರಂಗದ ಮಹಾನ್ ನಟನೊಬ್ಬ - ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನೊಬ್ಬ ಹೆಣ್ಣು ಬಾಕ ... ಎನ್ನುವ ವಿಚಾರಗಳು ಸತ್ಯವಾದರೂ ಜನರಿಗೆ ಅವರ ಸಾಧನೆಗಳ ಬಗ್ಗೆ ಗೌರವ ಕಡಿಮೆಯಾಗಿಲ್ಲ . ಕಾಮ ನಿಜಕ್ಕೂ ಒಂದು ಖಾಸಗಿ ಬದುಕು ... ತಿಳುವಳಿಕೆ ಸಾಕು ಪ್ರಚೋದನೆ ಬೇಕಿಲ್ಲ . ಏಕೆಂದರೆ ಅದೇ ಒಂದು ಪ್ರಚೋದನೆ ... ಅದೇ ಒಂದು ಅಗ್ನಿ ... ಅಸಂತುಷ್ಟ ಗುಪ್ತ ಕಾಮವನ್ನು ಅದರ ಪಾಡಿಗೆ ಬಿಟ್ಟು ತಲೆ ಕೆಡಿಸಿಕೊಳ್ಳದೆ ಯಾರಿಗೂ ಕೆಡುಕಾಗದೆ ನೋಡಿಕೊಂಡರೆ ಅಷ್ಟೇ ಸಾಕು.

ಸಿಎನ್ನಾರ್ ಎಂಬ ಸೃಜನಶೀಲತೆ

ಸಿಎನ್ನಾರ್ ಎಂಬ ಪದವನ್ನು ನನ್ನ ಜೀವನದಲ್ಲಿ ಮೊದಲು ನೋಡಿದ್ದು CNR ಎಂಬ ನನ್ನ ಸಂಕ್ಷಿಪ್ತ ಹೆಸರಿನ ಸೂಚಕವಾಗಿ. ಈಗಲೂ ನನ್ನನ್ನು ಸಿಎನ್ನಾರ್ ಎಂದು ಕರೆಯುವವರಿದ್ದಾರೆ. ಸಿಎನ್ನಾರ್ ಎನ್ನುವ ಮತ್ತೊಂದು ಹೆಸರು ಭಾರತ ರತ್ನ ಸಿಎನ್ನಾರ್ ರಾವ್ ನಮ್ಮ ಮಲ್ಲೇಶ್ವರದವರೇ. ನಮ್ಮ ಕುಟುಂಬಕ್ಕೂ "ರಾವ್" ಎನ್ನುವುದು ಕುಟುಂಬದ ಹೆಸರು ನನ್ನ ತಾತನ ಹೆಸರು ಸಿ ಆರ್ ಲಕ್ಷ್ಮೀನಾರಾಯಣ ರಾವ್. ನಾನು ಬಾಲ್ಯದಲ್ಲಿ ನಾನು ಅಂದುಕೊಳ್ಳುತ್ತಿದ್ದೆ ನನಗೆ ವಯಸ್ಸಾದ ಮೇಲೆ ನನ್ನ ಹೆಸರೂ ಸಿಎನ್ನಾರ್ ರಾವ್ ಅಂತಲೋ ಇಲ್ಲವೇ ಸಿ ಎನ್ ರಮೇಶ್ ರಾವ್ ಅಂತಲೋ ಆಗ ಬಹುದೆಂದು. ನನ್ನ ಮೆಚ್ಚಿನ ಸ್ನೇಹಿತರಾದ ಶ್ರೀ. ಪಿ ಎಂ ವಿಜೇಂದ್ರ ರಾವ್ ಅವರ ಆಪ್ತ ಸ್ನೇಹಿತರೊಬ್ಬರ ಹೆಸರೂ ಕೂಡ ಸಿ ಎನ್ ರಮೇಶ್ ರಾವ್. ಅವರೀಗ ತಮ್ಮ ಹೆಸರನ್ನು ರಮೇಶ್ ರಾವ್ ಎಂದಷ್ಟೇ ಸಂಕ್ಷಿಪ್ತಗೊಳಿಸಿದ್ದಾರೆ. ವಿದೇಶದಲ್ಲಿದ್ದರೂ ನಮ್ಮ ರಾಜಾಜಿನಗರದವರೇ. ಹೀಗೆ ಸಿಎನ್ನಾರ್ ಎಂಬ ಹೆಸರಿನಲ್ಲಿ ಸಾಕಷ್ಟು ಅನ್ವೇಷಣೆ - ಸಾಮ್ಯತೆ - ಸಾಮೀಪ್ಯತೆ ಇದೆ. ಈಗ ನಾನು ಪ್ರಸ್ತಾಪಿಸುತ್ತಿರುವ ಸಿಎನ್ನಾರ್ ಎಂಬ ಸೃಜನಶೀಲತೆ ಯಾರೆಂದರೆ ಮಂಗಳೂರು ವಿಶ್ವವಿದ್ಯಾಲದಲ್ಲಿ ಸುಳಿದಾಡಿದ ಪ್ರಸಿದ್ಧ ವಿಮರ್ಶಕ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾಕ್ಟರ್. ಸಿ ಎನ್ ರಾಮಚಂದ್ರನ್. ಆಶಯ ಆಕೃತಿ, ಪರಂಪರೆ ಪ್ರತಿರೋಧ ಮತ್ತು ಹೊಸ ಮಡಿಯ ಮೇಲೆ ಚದುರಂಗ ಎಂಬ ಪ್ರಸಿದ್ಧ ವಿಮರ್ಶಾ ಕೃತಿಗಳ ಸಿಎನ್ನಾರ್. ಪೈಪು ಸೇದುವ ಪಂಡಿತರಾಗಿದ್ದ ಸಿಎನ್ನಾರ್ ಆತ್ಮ ಚರಿತ್ರೆಯನ್ನು ಓದುವುದೇ ಬಹಳ ಖುಷಿ. ಅವರ ಕಥನಗಳು ಶೋಧ ಮತ್ತು ಕಂಸಾಂದ್ರ ಓದಿಯೇ ಸವಿಯಬೇಕು. ಸಿಎನ್ನಾರ್ ಅದ್ಭುತ ಮಾತುಗಾರ. ನಿರರ್ಗಳ ವಾಗ್ಜರಿ. ಸಿಎನ್ನಾರ್ ಅವರ ಬಾಲ್ಯ. ಓದಿನ ಬಗೆಗಿನ ತುಡಿತ, ವಿದೇಶದಲ್ಲಿ ಪಟ್ಟ ಪಾಡು, ಸ್ವದೇಶದಲ್ಲಿ ಎದುರಿಸಿದ ಕಷ್ಟಗಳು, ಭಾವುಕನಂತೆ ಗೋಚರಿಸದೆ ಹೋದರೂ ಅವರಲ್ಲಿರುವ ಅತೀ ಸೂಕ್ಷ್ಮ ಭಾವುಕ. ಸಮಗ್ರ ವ್ಯಕ್ತಿತ್ವವನ್ನು ಅವರ ಆತ್ಮ ಚರಿತ್ರೆಯನ್ನು ಓದಿಯೇ ತಿಳಿಯಬೇಕು. ಕಾಕತಾಳೀಯ ಎಂಬಂತೆ ನನ್ನದೊಂದು ಆಂಗ್ಲ ಭಾಷೆಯ ಅಧಿಕೃತ ಜೀವನ ಚರಿತ್ರೆ, ನನ್ನದೇ ಆದ ವಿದೇಶ ಪ್ರವಾಸಗಳು, ಅನುಭವಗಳೂ ನನ್ನ ಸಾಮ್ಯತೆ!!! ನನ್ನ ಜೀವನ ಚರಿತ್ರೆಯನ್ನು ನಾನು ಬರೆದಿಲ್ಲ ಅದನ್ನು ವೀಣಾ ಮಹೇಂದ್ರ ಅವರು ಬರೆದಿದ್ದಾರೆ ಹಾಗಾಗಿ ಅದು ನನ್ನ ಆತ್ಮ ಚರಿತ್ರೆಯಲ್ಲ. ಒಂದು ಜೀವನ ಚರಿತ್ರೆ ಅಷ್ಟೇ.


ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ( ನನ್ನ ಕನ್ನಡ ಉಪನ್ಯಾಸಕರು ಸಿಎನ್ನಾರ್ ಅವರ ಸಮಕಾಲೀನ ವಿಮರ್ಶಾ ಸ್ನೇಹಿತರು ),ಸಿಎನ್ನಾರ್ ಅವರನ್ನು ವಿದ್ವತ್‌ ಪರಂಪರೆಯ ಸಮರ್ಥ ಹಾಗೂ ಪ್ರತಿಭಾನ್ವಿತರು. ಸೂಕ್ಷ್ಮ ಹಾಗೂ ನೇರ ವ್ಯಕ್ತಿತ್ವ ಹೊಂದಿರುವ ಇವರು, ವಿನಯವಂತಿಕೆ ಬೆಳೆಸಿಕೊಂಡಿದ್ದಾರೆ. ಕತೆ, ಕಾದಂಬರಿ, ಅನುವಾದ ಹೀಗೆ ಬಹುಮುಖ ಪ್ರತಿಭೆಯಾಗಿರುವ ಸಿ.ಎನ್‌.ಆರ್‌. ಸಂಸ್ಕೃತಿಯ ಆಳ ಅಧ್ಯಯನಕಾರರು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸಿ ಎನ್ ರಾಮಚಂದ್ರನ್ ಅವರು ಸಮಕಾಲೀನ ಸಾಹಿತ್ಯದ ವಿಮರ್ಶಕ ಹಾಗೂ ವಿದ್ವಾಂಸ. ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ ಎ, ಅಮೆರಿಕದಲ್ಲಿ ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಪಿ ಎಚ್‌ ಡಿ ಮಾಡಿರುವ ಸಿಎನ್ನಾರ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದವರು. ಸಿಎನ್ನಾರ್ ಅವರ ಎರಡು ಮುಖ್ಯ ಕ್ಷೇತ್ರಗಳು - ಕನ್ನಡದಿಂದ ಇಂಗ್ಲಿಷಿಗೆ ಕನ್ನಡದ ಕೃತಿಗಳ ಅನುವಾದ; ಇನ್ನೊಂದು, ಕನ್ನಡ ಮೌಖಿಕ ಕಾವ್ಯಗಳ ಅಧ್ಯಯನ. ಕನ್ನಡ ಸಾಹಿತ್ಯದ ಲೇಖಕರನ್ನು ಹಾಗೂ ಕೃತಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿ ಮತ್ತು ಇಂಗ್ಲಿಷಿನಲ್ಲಿ ಪರಿಚಯಿಸಿ, ಕನ್ನಡಕ್ಕೆ ಜಾಗತಿಕ ವಿಸ್ತರಣೆಯನ್ನು ತಂದುಕೊಟ್ಟವರು. ಅಲ್ಲದೇ, ಕಾವ್ಯ, ನಾಟಕ, ಕಥಾಸಾಹಿತ್ಯ, ವೈಚಾರಿಕ ಸಾಹಿತ್ಯ ಮುಂತಾದ ಎಲ್ಲ ಪ್ರಕಾರಗಳ ಬಗ್ಗೆಯೂ ಸಿಎನ್ನಾರ್ ಬರೆದಿದ್ದಾರೆ. ಸಿಎನ್ನಾರ್ ತಮ್ಮ ಮಾತುಗಳಲ್ಲಿ 'ಆತ್ಮಕಥೆ' ಎಂಬ ಈ ಕಥನವನ್ನು ತುಂಬಾ ಅಳುಕಿನಿಂದ ಹಾಗೂ ಸಂಕೋಚದಿಂದ ಓದುಗರ ಮುಂದೆ ಇಡುತ್ತಿದ್ದೇನೆ. ಸಂಕೋಚವೇಕೆಂದರೆ, ಸಾಮಾನ್ಯವಾಗಿ ಬದುಕಿನಲ್ಲಿ ಬಹು ದೊಡ್ಡ ಸಾಧನೆ ಮಾಡಿರುವವರು ಹಾಗೂ ಓದುಗರಿಗೆ ಒಂದಲ್ಲಾ ಒಂದು ಬಗೆಯ ಮಾದರಿಯಾಗಿರುವವರು ತಮ್ಮ ಆತ್ಮಕಥೆಯನ್ನು ಬರೆಯುತ್ತಾರೆ; ನಾನೊಬ್ಬ ಸಾಮಾನ್ಯ ಮನುಷ್ಯ ಮತ್ತು ನನ್ನ ಬದುಕು ನನ್ನ ಸಮಕಾಲೀನರಾದ ಸಾವಿರಾರು ಜನರ ಬದುಕಿಗಿಂತ ಭಿನ್ನವಾದುದೇನೂ ಅಲ್ಲ. ಇನ್ನು ಅಳುಕು ಏಕೆಂದರೆ, ನಾನು ದಾಖಲಿಸಿರುವ ಘಟನೆಗಳು ಹಾಗೂ ಸಂಗತಿಗಳು ಸತ್ಯದೂರವಾಗಿರಬಹುದು ಅಥವಾ ಸ್ವವೈಭವೀಕರಣಕ್ಕೆ ಎಡೆಕೊಟ್ಟಿರಬಹುದು. ಆದರೂ, ಈಗ ನನಗೆ ಪ್ರಾಮಾಣಿಕವಾಗಿ 'ಹೀಗೆ ನಡೆದಿರಬಹುದು' ಎಂದು ಅನಿಸಿದುದನ್ನು ದಾಖಲಿಸಿದ್ದೇನೆ. ಹಾಗೆಯೇ, ಸಾಧ್ಯವಾದಷ್ಟೂ ಘಟನೆಗಳನ್ನು ಮಾತ್ರ ದಾಖಲಿಸಲು ಪ್ರಯತ್ನಿಸಿದ್ದೇನೆ; ಅವುಗಳ ಕಾರ್ಯ-ಕಾರಣ ಸಂಬಂಧಗಳನ್ನು ವಿಶ್ಲೇಷಿಸಲು ಹೋಗಿಲ್ಲ. ಏಕೆಂದರೆ, ಈಗ ನನಗೆ ತೋರುವಂತೆ ಬದುಕಿನಲ್ಲಿ ನಾನಾ ಬಗೆಯ ಘಟನೆಗಳು 'ಘಟಿಸುತ್ತವೆ', ಅಷ್ಟೇ. ಅವುಗಳಿಗೆ ಕಾರ್ಯ-ಕಾರಣ ಸಂಬಂಧಗಳೇನೂ ಇರುವುದಿಲ್ಲ, ಅಥವಾ ಇದ್ದರೂ ಮೇಲ್ನೋಟಕ್ಕೆ ಕಂಡುಬರುವಷ್ಟು ೧+೧=೨ ಎಂಬಂತೆ ಸರಳವೂ ಆಗಿರುವುದಿಲ್ಲ. ಮಾತ್ತೊಂದು ಸಾಮ್ಯತೆ ನನ್ನ ಜೀವನ ಚರಿತ್ರೆ A face in the crowd ಬರೆದಿರುವ ವೀಣಾ ಮಹೇಂದ್ರ ಅವರ ಮಾತುಗಳಲ್ಲಿ We need a CV Raman, an RK Narayan, an RK Laxman, a Sachin Tendulkar, a Lata Mangeshkar, a Ravi Varma, a Bertrand Russell, an Abraham Lincoln, and a Sankaracharya and an endless list of persons who can spread values of life. One need to realise that there is enough room in life for each one to move ahead without rubbing shoulders. Probably this is also one of the reasons why I chose to write the biography of Ramesh in view of the fact that I think he is the best paradigm for it. ಇರಲಿ ನಿಮ್ಮ ಜೊತೆ ಮನಸ್ಸು ಬಿಚ್ಚಿ ಒಂದೆರಡು ಮಾತು ಹಂಚಿಕೊಂಡರೆ ಅಷ್ಟೇ ನನಗೆ ಸಂತೋಷ.

ಬುಧವಾರ, ಮೇ 4

ನಮ್ಮ ಸಮಯ ಮತ್ತು ಬೆಳವಣಿಗೆ...

ನಮಗೆ ಇಂದು ಪುರುಸೊತ್ತಿಲ್ಲವಾ ಅಥವಾ ನಮ್ಮ ವೇಳಾಪಟ್ಟಿ ,ಸಮಯದ ಬಳಕೆ ಮತ್ತು ದಿನಚರಿ ಸರಿಯಿಲ್ಲವಾ? ಹೀಗೆ ನನಗೆ ನಾನೇ ಕೇಳಿಕೊಂಡಾಗ ಪ್ರಾಮಾಣಿಕವಾಗಿ ನನಗನ್ನಿಸಿದ್ದು ಮಾಡಬೇಕಾದ ಕೆಲಸಗಳಿಗಿಂತ ಕೆಲಸಕ್ಕೆ ಬಾರದ ಕೆಲಸಗಳಲ್ಲಿ ಜಾಸ್ತಿ ಸಮಯ ವ್ಯಯವಾಗುತ್ತಿದೆ.ಇಂತಹ ಅರಿವಿದ್ದರೂ ಮಾಡಿದ್ದೇ ತಪ್ಪು ಮಾಡುತ್ತಾ ಹೋದರೆ ನನ್ನ ಬೆಳವಣಿಗೆಯ ಜವಾಬ್ದಾರಿ ಯಾರು ಹೋರಬೇಕು?
ಒಂದು ಜವಾಬ್ದಾರಿಯುತ ನೌಕರಿ ನನಗಿದೆ.ಸಾಕಷ್ಟು ಪರಿಶ್ರಮದಿಂದ ತೊಡಗಿಸಿಕೊಂಡರೆ ನನ್ನ ಕ್ರಿಯಾಶೀಲತೆಗೆ ಭೂಷಣ. ನನ್ನ ಸಂವಹನ ಮತ್ತು ನಾಯಕತ್ವ ನನಗೆ ತೃಪ್ತಿ ನೀಡಿದೆ.ನನಗೆ ತೃಪ್ತಿಯಿಲ್ಲದೆ ಇರುವು...ದು ಸಾಕಷ್ಟು ಪರಿಶ್ರಮದಿಂದ ನನ್ನ ಚಿಂತನಾಶಕ್ತಿಯಿಂದ ಕಷ್ಟಪಟ್ಟು ಬೆಳವಣಿಗೆಯ ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಇರುವುದು. ಮತ್ತೊಂದು ಕಲಿಯಲು ಸಾಕಷ್ಟಿದೆ.I feel I am becoming like a rusted knife.I need to mend myself put myself back on track to creativities professionally.
ಜ್ಞಾನೋದಯಗಳು ಆಗಾಗ ಆಗುತ್ತವೆ.ಕೆಲವು ಅನುಷ್ಠಾನದಲ್ಲಿ ವಿಫಲ ಮತ್ತೆ ಕೆಲವು ಸಫಲ.ಜಾಗತಿಕ ಮಟ್ಟದ ಅತ್ಯುತ್ತಮ ಕೆಲಸಗಳಿಗೆ ವೃತ್ತಿ ಜೀವನ ಅವಕಾಶ ಮಾಡಿಕೊಟ್ಟಿದೆ.ದೇವರು ಏಕಾಗ್ರತೆ ಕೊಟ್ಟು ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಲಿ ಎಂಬ ಪ್ರಾರ್ಥನೆಯೊಂದಿಗೆ ಮುನ್ನುಗ್ಗುತ್ತಿದ್ದೇನೆ. ಇಲ್ಲೇಕೆ ಬರೆದ ಎಂದರೆ ಸ್ವಯಂ ಉತ್ತೇಜನ self motivation & my own commitment to myself.ನಿಮಗೆಲ್ಲಾ ಪ್ರೀತಿಯ ನಮಸ್ಕಾರಗಳು.

ಲವ್ ಇನ್ ಫೇಸ್ಬುಕ್ !!!

ಫೇಸ್ಬುಕ್ ಎಂಬ ಮಾಯಾ ಲೋಕ ಏನೆಲ್ಲಾ ಮಾಡುತ್ತದೆ. ಎಷ್ಟೊಂದು ಒಳ್ಳೆಯ ಸ್ನೇಹಿತರು. ಎಷ್ಟೊಂದು ಸಾಹಿತ್ಯ. ಎಷ್ಟೊಂದು ದೈನಂದಿನ ಸಂಭ್ರಮಗಳ ವಿನಿಮಯ. ಲವಲವಿಕೆಗೆ ಪ್ರತಿಯೊಬ್ಬರೂ ಇಲ್ಲಿ ಸೆಲೆಬ್ರಿಟಿ ಖುಷಿ ಅನುಭವಿಸುವ ವಿನೋದ ಲೋಕ. ಹೆಚ್ಚು ಕಡಿಮೆ ನಮ್ಮ ಪ್ರತಿನಿತ್ಯದ ಸಹಜ ಬದುಕಿನ ಅನಾವರಣ. ಇದೆಲ್ಲದರ ನಡುವೆ ಕೆಲವೊಂದು ಇರುಸು ಮುರುಸು. ಯಾರೋ ಸ್ನೇಹ ವಿನಂತಿ ಕಳುಹಿಸುತ್ತಾರೆ. ಯಾರೋ ಅಸಂಬದ್ಧ ಸಂವಾದಕ್ಕೆ ಇಳಿಯುತ್ತಾರೆ. ಒಂದು ಸಾಮಾನ್ಯ ಹೆಣ್ಣು ಒಂದು ಫೋಟೋ ಅಥವಾ ಬರಹ ಹಾಕಿದರೆ ಹಾಕಿದ ಒಂದು ಘಂಟೆಯಲ್ಲಿ ಶತಕ ದಾಟುವ ಲೈಕುಗಳು ಸಾಕಷ್ಟು ಕಾಮೆಂಟುಗಳು. ಅದೇ ಒಬ್ಬ ಸ...ಾಮಾನ್ಯ ಗಂಡು ಏನೇ ಹಾಕಿದರೂ ಮಾರನೆ ದಿನವಾದರೂ ಕಾಮೆಂಟು ಇರಲಿ ಒಂದು ಲೈಕು ಕೂಡ ಇರುವುದಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ತೀರಾ ಬೇಕಾದವರು ಒಂದೆರಡು ಲೈಕು ಒತ್ತಬಹುದು. ಅದೂ ವಸ್ತು ವಿನಿಮಯ ಪದ್ಧತಿಯ ಹಾಗೆ. ಲೈಕು - ಕಾಮೆಂಟು ವಿನಿಮಯ ಪದ್ಧತಿ. ಇಲ್ಲ ಅಂದರೆ ಸಾಕಷ್ಟು ಜನರನ್ನು ಪರಿಚಯಿಸಿಕೊಂಡು ಪ್ರತಿ ಲೈಕ್ ಮಾಡಿದವರಿಗೆ ಧನ್ಯವಾದ ಹೇಳಿ ಪ್ರತಿ ಕಾಮೆಂಟು ಮಾಡಿದವರಿಗೆ ಮತ್ತೊಂದು ಲೈಕ್ ಒತ್ತಿ ಪ್ರತಿಕ್ರಿಯೆ ಕಾಮೆಂಟು ಕೊಟ್ಟು. ಆ ಪ್ರಕಟಣೆಯ ಟಿ ಆರ್ ಪಿ ಕಾಪಾಡಿಕೊಂಡು ಸಂಭ್ರಮಿಸುವ ಸಾಹಸ. ಇದೆಲ್ಲಾ ನಾನು ಕಂಡ ಮತ್ತು ನಾನು ಮಾಡದ ಕೈಂಕರ್ಯಗಳು !!!
ಲವ್ ಇನ್ ಫೇಸ್ಬುಕ್ !!! ಮಾತ್ರ ನಾನು ಗುರುತಿಸುತ್ತಿರುವ ಹೊಸ ಪರಂಪರೆ. ಯಾವುದೇ ವಯೋಮಾನದ ಅಂತರವಿಲ್ಲದೆ ಗಂಡು - ಹೆಣ್ಣು ಸೂಕ್ಷ್ಮ ಸಂಬಂಧಗಳಿಗೆ ಒಳಪಡುವುದು. ನಿನ್ನನ್ನು ಬಿಟ್ಟರೆ ಇಲ್ಲ ಎಂದು ಬೆಳೆಸಿಕೊಳ್ಳುವ ಗಂಡಿನ ಪೊಸೆಸಿವೆನೆಸ್ !!! ತನಗಿರುವ ಸಮಾಜದ ಸ್ಥಾನಮಾನ ಕುಟುಂಬದ ಜವಾಬ್ದಾರಿ, ಒಳ್ಳೆಯ ಇಮೇಜ್ ಎಲ್ಲಾ ಮರೆತು ಬೇಡದ ಪರಮ ಸಾಹಸಗಳಿಗೆ ಕೈ ಹಾಕುವುದು ಮಾತ್ರ ವಿಪರೀತ. ನಿನ್ನೆ ಒಬ್ಬರು ಹಿರಿಯ ಮಹಿಳೆ ಮಾತನಾಡುತ್ತಿದ್ದರು. ಅವರಿಗೆ ಐವತ್ತು ದಾಟಿದೆ. ಅವರ ಮಗನಿಗೆ ಮದುವೆಯಾಗಿದೆ ಆತನಿಗೂ ಒಂದು ಮಗುವಿದೆ. ಹಾಗಾಗಿ ಆ ಹಿರಿಯ ಮಹಿಳೆ ಅಜ್ಜಿ. ಬದುಕಿನಲ್ಲಿ ಸಂತೋಷವಾಗಿ ಇರಬೇಕಿರುವುದು ಎಲ್ಲರ ಹಕ್ಕು. ಅವರು ಕೂಡ ಲವಲವಿಕೆಯಿಂದ ಇರುತ್ತಾರೆ. ಆದರೆ ವಿವೇಚನೆಯಿಂದ ಬದುಕನ್ನು ತಿಳಿದವರು. ಅಂತಹ ಹಿರಿಯ ಮಹಿಳೆಯ ಮೇಲೂ ಪೊಸೆಸಿವ್ನೆಸ್ ಬೆಳೆಸಿಕೊಳ್ಳುವ ಕಿರಿಯ ಗಂಡಸರ ಬಗ್ಗೆ ತಿಳಿಸಿದರು. ಆತ್ಮೀಯತೆ - ಭಾವನಾತ್ಮಕತೆ - ಸ್ಪಂದನೆ ಇವೆಲ್ಲಾ ಸರಿ. ಆದರೆ ನೇರವಾಗಿ ಕಾಮದ ನಿವೇದನೆ. ಯಾವುದೇ ವಯಸ್ಸು, ಸಮಾಜ, ಕುಟುಂಬ ಇವೆಲ್ಲವನ್ನೂ ಮರೆತು ತಮ್ಮದೇ ಆದ ಖಾಸಗಿ ಸಾಮ್ರಾಜ್ಯದಲ್ಲಿ ತಮ್ಮತನವನ್ನೇ ಬಿಟ್ಟು ಲವ್ ಇನ್ ಫೇಸ್ಬುಕ್ !!! ಇದೆಯೆಲ್ಲಾ ಇದು ತುಂಬಾ ವಿಪರೀತ ಆಲ್ವಾ ???
ಇವುಗಳ ಮಧ್ಯೆ ಯಾರದೋ ಅಮಾಯಕರ ಗೋಡೆಯ ಮೇಲೆ ಅಶ್ಲೀಲ ದೃಶ್ಯಾವಳಿ ಮತ್ತು ಚಿತ್ರಗಳ ಹಂಚಿಕೆಗಳ ಇರುಸು ಮುರುಸು. ಇಷ್ಟೆಲ್ಲಾ ಬರೆದಿರುವುದು ಕಪೋಲ ಕಲ್ಪಿತ ಕಥೆಗಳಲ್ಲಾ. ಫೇಸ್ಬುಕ್ ಲೋಕದಲ್ಲಿ ನಿಧಾನವಾಗಿ ಹೆಚ್ಚಾಗುತ್ತಿರುವ ನಿರಂತರ ಕಿರಿ ಕಿರಿಗಳು. ಎಲ್ಲರೂ ಯಾರ ಬಳಿಯೂ ಹೇಳಿಕೊಳ್ಳಲಾಗದ ಹಾವಳಿಗಳು. ಕೆಲವರು ಉಗಿಯುತ್ತಾರೆ. ಕೆಲವರು ಸೈಬರ್ ದೂರು ಕೊಡುತ್ತಾರೆ. ಮುಖಪುಟದ ಸಹವಾಸವೇ ಬೇಡ ಎಂದು ಖಾತೆ ಮುಚ್ಚುತ್ತಾರೆ. ಯಾಕೆ ಬೇಕು ಈ ವಿಚಿತ್ರ ಸಂಕಟ. ಫೇಸ್ಬುಕ್ ಎಂಬುದು ನಮ್ಮದೇ ಮುಖಪುಟ. ಮುಖವಾಡದ ಬದುಕು ಎಷ್ಟು ದಿನ ತಾನೇ ನಿಲ್ಲಲು ಸಾಧ್ಯ ? ವ್ಯಕ್ತಿತ್ವಗಳ ಮಾನ ಮರ್ಯಾದೆ ಹರಾಜಾಗುವಷ್ಟು ಮನುಷ್ಯರು ಕಿಂಚಿತ್ತೂ ಯೋಚಿಸದೆ ಆಡಿದ್ದೆ ಆಟ ಆಡುತ್ತಿದ್ದರೆ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸುವುದಿಲ್ಲವೇ ? ಆಡಿಸುವಾತನ ಬೇಸರ ಮೂಡಿಸುವುದು ಬೇಡ ಆಲ್ವಾ. ಸಾಕಷ್ಟು ಜನರಿಂದ ಕೇಳಿ. ಎಲ್ಲರ ನೋವಿನ ಪರವಾಗಿ ಅಂತರಂಗ ಬಹಿರಂಗ ಎಂಬ ಸತ್ಯಸ್ಯ ಸತ್ಯ ವಿಚಾರ ಬರೆದಿದ್ದೇನೆ. ಲವ್ ಇನ್ ಫೇಸ್ಬುಕ್ !!! ಲಿವ್ ಇನ್ ಫೇಸ್ಬುಕ್ !!! ಲಾಸ್ಟ್ ಇನ್ ಫೇಸ್ಬುಕ್ !!!

ಭಸ್ಮಾಸುರನ ಬದುಕು ಶೋಭೆಯಲ್ಲ..

ಒಂದು ಪುಟ್ಟ ಅಧ್ಯಯನ ಮಾಡಿದಾಗ ಅನ್ನಿಸಿದ್ದು ಸಾಕಷ್ಟು ಮಂದಿ ಭಸ್ಮಾಸುರನ ಗುಣಲಕ್ಷಣಗಳನ್ನು ಬೆಳೆಸಿಕೊಂಡು ಅನರ್ಥದ ನಡೆಗಳಲ್ಲಿ ಆದರ್ಶದ ಮುಖವಾಡ ಹಾಕಿಕೊಂಡು ನಡೆಯುತ್ತಿದ್ದಾರೆ. ಇದು ಖಂಡಿತಾ ಶೋಭೆಯಲ್ಲ.ನಿಮಗೆ ಉಪಕಾರ ಮಾಡುವ ವ್ಯಕ್ತಿಗೆ ನೀವು ಅಪಕಾರ ಮಾಡಿದರೆ ದೇವರು ಕ್ಷಮಿಸುತ್ತಾನಾ? ಕೃತಜ್ಞತೆ ಇಲ್ಲದ ಬದುಕು!!!
ನೀವು ಯಾರಿಗಾದರೂ ಸಹಾಯ ಮಾಡಿದರೆ ನಿಮ್ಮ ಮನಃ ತೃಪ್ತಿ ಮತ್ತು ಆತ್ಮ ತೃಪ್ತಿ.ಅದು ಬಿಟ್ಟು ನಾನು ಅವರಿಗೆ ಆ ಸಹಾಯ ಮಾಡಿದೆ ಇವರಿಗೆ ಈ ಸಹಾಯ ಮಾಡಿದೆ ಅಂತ ಹೇಳುವಿರಾ? ಪ್ರತಿಭೆ ಮತ್ತು ನಾಯಕತ್ವದ ಸ್ನೇಹ ನಿದರ್ಶನ ಶ್ರೇಷ್ಟತೆ ಬಯಸುತ್ತದೆ.ಯಾರ...ೋ ಏನೋ ನಿಮ್ಮ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರೆ ನಿಮ್ಮ ಬೆಲೆ ಕಡಿಮೆಯಾಗುತ್ತದಾ?
ನಾನು ನೋಡಿದ ಮಹಾನ್ ವ್ಯಕ್ತಿ ವಾಸನ್. ಮುಚ್ಚುಮರೆಯಿಲ್ಲದೆ ಸತ್ಯವನ್ನು ತಿಳಿಸುವ ನುಡಿದಂತೆ ನಡೆಯುವ ವಿಚಾರವಾದಿ.ಸಾವಿರಾರು ಅಯೋಗ್ಯ ಮನಸ್ಸಿನ ಸ್ನೇಹಿತರಿಗಿಂತ ಒಂದೆರಡು ಉತ್ತಮ ಮನಸ್ಸಿನ ಸ್ನೇಹಿತರು ಸಾಕಲ್ಲವೇ??? ನಿಮನ್ನು ಅರ್ಥ ಮಾಡಿಕೊಳ್ಳಲು ನಿಮ್ಮಂತೆಯೇ ಮನಸ್ಸಿರುವ ಜನರಿಂದ ಮಾತ್ರ ಸಾಧ್ಯ. ಭಸ್ಮಾಸುರರು ಕೊನೆಗೆ ತಮ್ಮ ತಲೆಯ ಮೇಲೆ ತಾವೇ ಕೈಯಿಟ್ಟುಕೊಳ್ಳುವಂತೆ ಖಂಡಿತ ಆ ದಿವ್ಯಶಕ್ತಿ ಮಾಡಿಸುತ್ದದೆ.ಅದರಲ್ಲಿ ನನಗೆ ನಂಬಿಕೆ ಇದೆ.

ಭಾವನೆಗಳಿಗೂ ಆಯುಷ್ಯವಿರುತ್ತದಾ ???

ಬಿಕ್ಕಿ ಬಿಕ್ಕಿ ಅಳುವ ನಿರಂತರ ಯಾತನೆಗಳ ನಡುವೆ ಸಾಗುವ ಕೆಲವರ ಬದುಕು ಭಾವಶೂನ್ಯತೆಯಿಂದ ನರಳುತ್ತದಾ.ಭಾವನೆಗಳು ಸತ್ತು ಹೋಗುತ್ತವಾ.ಹಾಗಾದರೆ ಭಾವನೆಗಳಿಗೂ ಆಯುಷ್ಯವಿರುತ್ತದಾ???
ಕನಸ್ಸು ಕಟ್ಟಿಕೊಳ್ಳುವ ಭಾವನೆಗಳು ಬದುಕಿನ ಹಟಾತ್ ಜರ್ಜರಿತತೆಯಿಂದ ಯಾವ ಮಟ್ಟ ತಲುಪುತ್ತದೆ ಗೊತ್ತಾ??? ಬದುಕೇ ಮುಗಿದು ಹೋದಂತೆ ನನಗೇನು ಬೇಕಾಗಿಲ್ಲ ಬದುಕೇ ಬೇಕಾಗಿಲ್ಲ ಅನ್ನಿಸುವ ಭಾವನೆಗಳ ಅಂದಾಜು ಮಾಡಬಹುದಾ ???
...
ಹೀಗೆಲ್ಲಾ ಪ್ರತಿ ಮನುಷ್ಯನಿಗೆ ಸೂಕ್ಷ್ಮ ಸನ್ನಿವೇಷಗಳು ಬದುಕಿನಲ್ಲಿ ಬಂದು ಹೋಗುತ್ತದೆ ಮತ್ತು ಅದು ಹೋಗಲೇ ಬೇಕು.ಒಂದು ವೇಳೆ ಅದು ಹೋಗದೆ ಖಾಯಂ ನೆಲೆಸಿಬಿಟ್ಟರೆ ಸಾವಿನ ಲೋಕದ ಹೆಬ್ಬಾಗಿಲು ತೆರೆದಂತೆಯೇ ಲೆಕ್ಕ.
ಮನುಷ್ಯ ಸಂಬಂಧಗಳಲ್ಲಿ ನಂಬಿಕೆ ಇಲ್ಲ.ಬಂಧು ಬಾಂಧವರು ಅಸೂಯೆ ಪಡುವವರು ಸ್ನೇಹಿತರು ಮುಚ್ಚುಮರೆಯಿಂದ ನಡೆದುಕೊಳ್ಳುತ್ತಾರೆ.ಧರ್ಮರಾಯನಂತೆ ಬದುಕು ನಡೆಸಿದರೂ ಅಪವಾದ ಹೀಗೆ ಹೈರಾಣಿಸಿ ಹೋಗುವ ಬದುಕಿನಲ್ಲಿ ಭಾವನೆಗಳ ಪಾತ್ರವೇನು? ಅವೆಲ್ಲಾ ಸತ್ತು ಹೋದರೂ ವ್ಯಕ್ತಿ ಬದುಕುತ್ತಿರುತ್ತಾನೆ ಗೊಂಬೆಗಳ ಲವ್ ಪಾತ್ರಗಳಂತೆ.
ಇದೆಲ್ಲವನ್ನೂ ಮೆಟ್ಟಿ ನಿಲ್ಲುವ ಮನೋರಂಜನೆ,ಕುಪಿತ ಬುದ್ಧಿ ಅರ್ಥವಿಲ್ಲದ ಸಾಗುವ ಬದುಕಿನ ಸಹಪ್ರಯಾಣಿಕರು.ಹೀಗೆಲ್ಲಾ ಬದುಕಿನ ಪಥಸಂಚಲನೆಯಲ್ಲಿ ಮಾತಾಡು ಸಾಕು ಮೌನ ಬಿಸಾಕು ಎಂಬ ಭಾವನೆ ಹೊಸಹುಟ್ಟು.ಬದುಕು ಎಂಬುದರ ಅರ್ಥ ಸಾಕಷ್ಡು ಬದಲಾಗಿದೆ.ಬದುಕುತ್ತಿರುವುದು ಯಾವ ಅಸ್ತಿತ್ವ!!! ಆತ್ಮ!!! ಪ್ರಾಣಿಯಂತೆ ದೇಹ!!! ಜೀವಂತ ಶವ!!!ಅವರವರ ಭಾವಕ್ಕೆ ಭಾವನೆಗಳ ಆಯುಷ್ಯದಂತೆ ಬದುಕು ನಿಧಾನವಾಗಿ ಕಮರಿಹೋಗುವುದು ಕರಾಳ ಸತ್ಯ.

ಬರೆದು ಬರೆದು ಕಿಸಿದಿದ್ದೇನು???

ಬರೆದು ಬರೆದು ಕಿಸಿದಿದ್ದೇನು???
ನಾನೂ ಒಬ್ಬ ಬರಹಗಾರ.ನನ್ನ ಬರಹಗಳನ್ನೂ ಒಂದಷ್ಟು ಕ್ರಿಯಾಶೀಲ ಜನರು ಓದುತ್ತಾರೆ.ನನಗೆ ಮೆಚ್ಚುಗೆ ಮತ್ತು ಪ್ರತಿಕ್ರಿಯೆ ಪಡೆಯುವ ಆಸೆಯೇ ಹುಟ್ಟಲಿಲ್ಲ.ಹುಟ್ಟುವುದೂ ಇಲ್ಲ.ಇನ್ನು ನಾನು ಬರೆದು ಬರೆದು ಕಿಸಿದಿದ್ದೇನು? ??
ಬರಹಗಳಿಂದ ನಾನು ಬೆಳೆದಿದ್ದೇನೆ.ಈ ಬರವಣಿಗೆ ನನ್ನ ಬದುಕಿಗೆ ನಾನು ಮಾಡಿಕೊಳ್ಳುತ್ತಿರುವ ಹೋಂ ವರ್ಕ್.ಒಂದು ಬರವಣಿಗೆಯ ತಾಕತ್ತು ಒಂದೇ ದಿನ.ಶಾಲೆಯಲ್ಲಿ ಹೋಂ ವರ್ಕ್ ನೋಡುವ ತನಕ.ಬಿಸಿ ಬಿಸಿ ತಿಂಡಿ ಖರ್ಚಾಗುವ ತನಕ.ಆದರೆ ಉತ್ಸಾಹ ಕುಸಿಯಲಿಲ್ಲ.ಅಕ್ಷರ ಪ್ರೀತಿ.
ಹಿಂದೆಲ್ಲಾ ಬರವಣಿಗೆ ಇಷ್ಟಪಟ್ಟವರು ತೋಚಿದ್ದು ಏನೋ ಬರೆದು ಆ ಪುಟವನ್ನು ಮುದುರಿ ಬಿಸಾಡಿದಂತೆ ಒಂದು ವಿಷಯ ಬರೆಯುವುದು ಪೋಸ್ಟ್ ಮಾಡಿದ ನಂತರ ಮರೆಯುವುದು.ಇದಿಷ್ಟೇ ನಾನು ಮಾಡುತ್ತಿರುವ ಘನಂದಾರಿ ಕೆಲಸ.ಬೇರೇನೂ ಇಲ್ಲಾ ಅಲ್ವಾ? ??