ಬುಧವಾರ, ಮೇ 4

ಲವ್ ಇನ್ ಫೇಸ್ಬುಕ್ !!!

ಫೇಸ್ಬುಕ್ ಎಂಬ ಮಾಯಾ ಲೋಕ ಏನೆಲ್ಲಾ ಮಾಡುತ್ತದೆ. ಎಷ್ಟೊಂದು ಒಳ್ಳೆಯ ಸ್ನೇಹಿತರು. ಎಷ್ಟೊಂದು ಸಾಹಿತ್ಯ. ಎಷ್ಟೊಂದು ದೈನಂದಿನ ಸಂಭ್ರಮಗಳ ವಿನಿಮಯ. ಲವಲವಿಕೆಗೆ ಪ್ರತಿಯೊಬ್ಬರೂ ಇಲ್ಲಿ ಸೆಲೆಬ್ರಿಟಿ ಖುಷಿ ಅನುಭವಿಸುವ ವಿನೋದ ಲೋಕ. ಹೆಚ್ಚು ಕಡಿಮೆ ನಮ್ಮ ಪ್ರತಿನಿತ್ಯದ ಸಹಜ ಬದುಕಿನ ಅನಾವರಣ. ಇದೆಲ್ಲದರ ನಡುವೆ ಕೆಲವೊಂದು ಇರುಸು ಮುರುಸು. ಯಾರೋ ಸ್ನೇಹ ವಿನಂತಿ ಕಳುಹಿಸುತ್ತಾರೆ. ಯಾರೋ ಅಸಂಬದ್ಧ ಸಂವಾದಕ್ಕೆ ಇಳಿಯುತ್ತಾರೆ. ಒಂದು ಸಾಮಾನ್ಯ ಹೆಣ್ಣು ಒಂದು ಫೋಟೋ ಅಥವಾ ಬರಹ ಹಾಕಿದರೆ ಹಾಕಿದ ಒಂದು ಘಂಟೆಯಲ್ಲಿ ಶತಕ ದಾಟುವ ಲೈಕುಗಳು ಸಾಕಷ್ಟು ಕಾಮೆಂಟುಗಳು. ಅದೇ ಒಬ್ಬ ಸ...ಾಮಾನ್ಯ ಗಂಡು ಏನೇ ಹಾಕಿದರೂ ಮಾರನೆ ದಿನವಾದರೂ ಕಾಮೆಂಟು ಇರಲಿ ಒಂದು ಲೈಕು ಕೂಡ ಇರುವುದಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ತೀರಾ ಬೇಕಾದವರು ಒಂದೆರಡು ಲೈಕು ಒತ್ತಬಹುದು. ಅದೂ ವಸ್ತು ವಿನಿಮಯ ಪದ್ಧತಿಯ ಹಾಗೆ. ಲೈಕು - ಕಾಮೆಂಟು ವಿನಿಮಯ ಪದ್ಧತಿ. ಇಲ್ಲ ಅಂದರೆ ಸಾಕಷ್ಟು ಜನರನ್ನು ಪರಿಚಯಿಸಿಕೊಂಡು ಪ್ರತಿ ಲೈಕ್ ಮಾಡಿದವರಿಗೆ ಧನ್ಯವಾದ ಹೇಳಿ ಪ್ರತಿ ಕಾಮೆಂಟು ಮಾಡಿದವರಿಗೆ ಮತ್ತೊಂದು ಲೈಕ್ ಒತ್ತಿ ಪ್ರತಿಕ್ರಿಯೆ ಕಾಮೆಂಟು ಕೊಟ್ಟು. ಆ ಪ್ರಕಟಣೆಯ ಟಿ ಆರ್ ಪಿ ಕಾಪಾಡಿಕೊಂಡು ಸಂಭ್ರಮಿಸುವ ಸಾಹಸ. ಇದೆಲ್ಲಾ ನಾನು ಕಂಡ ಮತ್ತು ನಾನು ಮಾಡದ ಕೈಂಕರ್ಯಗಳು !!!
ಲವ್ ಇನ್ ಫೇಸ್ಬುಕ್ !!! ಮಾತ್ರ ನಾನು ಗುರುತಿಸುತ್ತಿರುವ ಹೊಸ ಪರಂಪರೆ. ಯಾವುದೇ ವಯೋಮಾನದ ಅಂತರವಿಲ್ಲದೆ ಗಂಡು - ಹೆಣ್ಣು ಸೂಕ್ಷ್ಮ ಸಂಬಂಧಗಳಿಗೆ ಒಳಪಡುವುದು. ನಿನ್ನನ್ನು ಬಿಟ್ಟರೆ ಇಲ್ಲ ಎಂದು ಬೆಳೆಸಿಕೊಳ್ಳುವ ಗಂಡಿನ ಪೊಸೆಸಿವೆನೆಸ್ !!! ತನಗಿರುವ ಸಮಾಜದ ಸ್ಥಾನಮಾನ ಕುಟುಂಬದ ಜವಾಬ್ದಾರಿ, ಒಳ್ಳೆಯ ಇಮೇಜ್ ಎಲ್ಲಾ ಮರೆತು ಬೇಡದ ಪರಮ ಸಾಹಸಗಳಿಗೆ ಕೈ ಹಾಕುವುದು ಮಾತ್ರ ವಿಪರೀತ. ನಿನ್ನೆ ಒಬ್ಬರು ಹಿರಿಯ ಮಹಿಳೆ ಮಾತನಾಡುತ್ತಿದ್ದರು. ಅವರಿಗೆ ಐವತ್ತು ದಾಟಿದೆ. ಅವರ ಮಗನಿಗೆ ಮದುವೆಯಾಗಿದೆ ಆತನಿಗೂ ಒಂದು ಮಗುವಿದೆ. ಹಾಗಾಗಿ ಆ ಹಿರಿಯ ಮಹಿಳೆ ಅಜ್ಜಿ. ಬದುಕಿನಲ್ಲಿ ಸಂತೋಷವಾಗಿ ಇರಬೇಕಿರುವುದು ಎಲ್ಲರ ಹಕ್ಕು. ಅವರು ಕೂಡ ಲವಲವಿಕೆಯಿಂದ ಇರುತ್ತಾರೆ. ಆದರೆ ವಿವೇಚನೆಯಿಂದ ಬದುಕನ್ನು ತಿಳಿದವರು. ಅಂತಹ ಹಿರಿಯ ಮಹಿಳೆಯ ಮೇಲೂ ಪೊಸೆಸಿವ್ನೆಸ್ ಬೆಳೆಸಿಕೊಳ್ಳುವ ಕಿರಿಯ ಗಂಡಸರ ಬಗ್ಗೆ ತಿಳಿಸಿದರು. ಆತ್ಮೀಯತೆ - ಭಾವನಾತ್ಮಕತೆ - ಸ್ಪಂದನೆ ಇವೆಲ್ಲಾ ಸರಿ. ಆದರೆ ನೇರವಾಗಿ ಕಾಮದ ನಿವೇದನೆ. ಯಾವುದೇ ವಯಸ್ಸು, ಸಮಾಜ, ಕುಟುಂಬ ಇವೆಲ್ಲವನ್ನೂ ಮರೆತು ತಮ್ಮದೇ ಆದ ಖಾಸಗಿ ಸಾಮ್ರಾಜ್ಯದಲ್ಲಿ ತಮ್ಮತನವನ್ನೇ ಬಿಟ್ಟು ಲವ್ ಇನ್ ಫೇಸ್ಬುಕ್ !!! ಇದೆಯೆಲ್ಲಾ ಇದು ತುಂಬಾ ವಿಪರೀತ ಆಲ್ವಾ ???
ಇವುಗಳ ಮಧ್ಯೆ ಯಾರದೋ ಅಮಾಯಕರ ಗೋಡೆಯ ಮೇಲೆ ಅಶ್ಲೀಲ ದೃಶ್ಯಾವಳಿ ಮತ್ತು ಚಿತ್ರಗಳ ಹಂಚಿಕೆಗಳ ಇರುಸು ಮುರುಸು. ಇಷ್ಟೆಲ್ಲಾ ಬರೆದಿರುವುದು ಕಪೋಲ ಕಲ್ಪಿತ ಕಥೆಗಳಲ್ಲಾ. ಫೇಸ್ಬುಕ್ ಲೋಕದಲ್ಲಿ ನಿಧಾನವಾಗಿ ಹೆಚ್ಚಾಗುತ್ತಿರುವ ನಿರಂತರ ಕಿರಿ ಕಿರಿಗಳು. ಎಲ್ಲರೂ ಯಾರ ಬಳಿಯೂ ಹೇಳಿಕೊಳ್ಳಲಾಗದ ಹಾವಳಿಗಳು. ಕೆಲವರು ಉಗಿಯುತ್ತಾರೆ. ಕೆಲವರು ಸೈಬರ್ ದೂರು ಕೊಡುತ್ತಾರೆ. ಮುಖಪುಟದ ಸಹವಾಸವೇ ಬೇಡ ಎಂದು ಖಾತೆ ಮುಚ್ಚುತ್ತಾರೆ. ಯಾಕೆ ಬೇಕು ಈ ವಿಚಿತ್ರ ಸಂಕಟ. ಫೇಸ್ಬುಕ್ ಎಂಬುದು ನಮ್ಮದೇ ಮುಖಪುಟ. ಮುಖವಾಡದ ಬದುಕು ಎಷ್ಟು ದಿನ ತಾನೇ ನಿಲ್ಲಲು ಸಾಧ್ಯ ? ವ್ಯಕ್ತಿತ್ವಗಳ ಮಾನ ಮರ್ಯಾದೆ ಹರಾಜಾಗುವಷ್ಟು ಮನುಷ್ಯರು ಕಿಂಚಿತ್ತೂ ಯೋಚಿಸದೆ ಆಡಿದ್ದೆ ಆಟ ಆಡುತ್ತಿದ್ದರೆ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸುವುದಿಲ್ಲವೇ ? ಆಡಿಸುವಾತನ ಬೇಸರ ಮೂಡಿಸುವುದು ಬೇಡ ಆಲ್ವಾ. ಸಾಕಷ್ಟು ಜನರಿಂದ ಕೇಳಿ. ಎಲ್ಲರ ನೋವಿನ ಪರವಾಗಿ ಅಂತರಂಗ ಬಹಿರಂಗ ಎಂಬ ಸತ್ಯಸ್ಯ ಸತ್ಯ ವಿಚಾರ ಬರೆದಿದ್ದೇನೆ. ಲವ್ ಇನ್ ಫೇಸ್ಬುಕ್ !!! ಲಿವ್ ಇನ್ ಫೇಸ್ಬುಕ್ !!! ಲಾಸ್ಟ್ ಇನ್ ಫೇಸ್ಬುಕ್ !!!

ಕಾಮೆಂಟ್‌ಗಳಿಲ್ಲ: