ಗುರುವಾರ, ಮೇ 12

ಮನಸ್ಸು ನಿರ್ಮಲಗೊಳಿಸುವ ಪ್ರಯತ್ನದಲ್ಲಿ ಸಫಲತೆ ಕಾಣಲು ಒಮ್ಮೆ ಅತ್ತು ಬಿಟ್ಟರೆ ಸಾಕು !

ಗಂಭೀರವಾದ ಮೌನ ಮನಸ್ಸಿನಲ್ಲಿ ಪ್ರಶಾಂತತೆ ಉಂಟು ಮಾಡಿದರೆ ಒಂದು ದಿನದ ಉಪವಾಸ ಮನಸ್ಸಿಗೊಂದು ಸಂಕಲ್ಪವನ್ನು ತಂದುಕೊಡುತ್ತದೆ. ಕಣ್ಣಿನ ತುಂಬಾ ಮನ ಬಿಚ್ಚಿ ಒಮ್ಮೆ ಅತ್ತು ಬಿಟ್ಟರೆ ಅದರ ಖುಷಿಯೇ ಬೇರೆ. ಕಣ್ಣಿನ ಜೊತೆಗೆ ಮನಸ್ಸಿನ ಶುದ್ಧೀಕರಣವೂ ಆಗುತ್ತದೆ. ನಂತರದಲ್ಲಿ ಹೊಸ ಹೊಸ ಚಿಂತನೆಗಳು, ಆಸೆಗಳು ಹುಟ್ಟುತ್ತವೆ. ಅದಾವುದೋ ನಿರ್ಮಲವಾದ ಭಾವನೆ ಮನದಲ್ಲಿ ದೃಢಗೊಳ್ಳುತ್ತದೆ. ಹಗುರವೆನಿಸುವ ಭಕ್ತಿ ಪ್ರಧಾನ ಗೀತೆಗಳು ಜ್ಞಾಪಕಕ್ಕೆ ಬರುತ್ತವೆ. ರಾಮನ ಅವತಾರ. ರಘುಕುಲ ಸೋಮನ ಅವತಾರ ಎಂಬ ಇಡೀ ರಾಮಾಯಣದ ಪಾ...ತ್ರಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಮನಸ್ಸು ತಿಳಿಯಾಗುತ್ತಿದ್ದಂತೆ ಸಜ್ಜನರ ಸಹವಾಸ ಸದ್ಗುಣಗಳ ಅರಸುವಿಕೆಯ ಸ್ವರೂಪ ಜಾಗೃತವಾಗಿ ಉತ್ಕಟವಾಗುತ್ತದೆ. ಒಂದು ತಿಳಿ ಸುಖದ ಮಂಪರು ಆವರಿಸಿ ಹಾಯ್ ಎನಿಸುತ್ತದೆ. ಕಣ್ಣು ಮುಚ್ಚಿ ಪುಟ್ಟ ನಿದ್ರೆ ಮಾಡಬೇಕೆನಿಸುತ್ತದೆ. ಜೀವನದಲ್ಲಿ ಗಳಿಸಿದ್ದರ ಬಗ್ಗೆ, ಕಳೆದುಹೋದ ಸಮಯದ ಬಗ್ಗೆ, ಕಳೆದುಕೊಂಡ ವಿಶೇಷಗಳ ಬಗ್ಗೆ ಲೆಕ್ಕಾಚಾರ ನಡೆಯುತ್ತದೆ. ಮನಸ್ಸು ಇನ್ನಷ್ಟು ಬಲಿಷ್ಟವಾಗಿ ಬೆಳೆಯುತ್ತದೆ. ನನ್ನ ದೃಷ್ಟಿಯಲ್ಲಿ ಅಳು ಕೂಡ ಒಂದು ಸುಖ. ನನ್ನಂತಹ ಕೆಲವರಿಗೆ ಅಳಬೇಕು ಅನ್ನೋ ಹಂಬಲವಿದ್ದರೂ ಅಳು ಅನ್ನುವುದೇ ಬರದೆ ಸಾಕಷ್ಟು ಕೊರತೆ ಇದೆ ಎಂದೇ ಭಾಸವಾಗುತ್ತದೆ. ಯಾರಾದರು ಅಳುತ್ತಿದ್ದರೆ ನಾನು ಹತ್ತಿರ ಹೋಗಿ ಅಳ ಬೇಡಿ ಎಂದು ಸಮಾಧಾನದ ಮಾತುಗಳನ್ನು ಹೇಳಲು ಪ್ರಯತ್ನಿಸುವುದಿಲ್ಲ. ಸೂಕ್ಷ್ಮವಾಗಿ ಅವರ ಕಣ್ಣಿನಲ್ಲಿ ಒಮ್ಮೆ ಕಣ್ಣಿಟ್ಟು ಅತ್ತು ಬಿಡಿ ಪರವಾಗಿಲ್ಲ ಎಂಬ ಭಾವನೆ ಪ್ರಕಟಿಸಿರುತ್ತೇನೆ. ಅಳುವೂ ಕೂಡ ಒಂದು ಸ್ವಾತಂತ್ರ್ಯ. ಅಂದ ಹಾಗೆ ನಾವು ಅಳುತ್ತಲೇ ಈ ಭೂಮಿಗೆ ಬರುವುದಲ್ಲವೇ. ನಾವು ಭೂಮಿ ಬಿಟ್ಟ ಹೋದ ಸಂದರ್ಭದಲ್ಲಿಯೂ ಕೆಲವರು ಅಳುತ್ತಾರೆ ಅಲ್ಲವೇ ? ಅದೂ ಕಡಿಮೆಯಾಗಿ ಹೋಗಿದೆ ಎಂಬುದು ನನ್ನ ಸೂಕ್ಷ್ಮ ಅಂದಾಜು ! ದಿನ ಸಾಯುವವರಿಗೆ ಅಳುವವರು ಯಾರು ಅನ್ನೋ ಮಾತಿದೆ. ದಿನ ಸಾಯುವ ಮಂದಿ ನಾವೇ ಆಗಿದ್ದರೂ ಅಳು ಬರಿಸಿಕೊಳ್ಳುವ ಅದೃಷ್ಟವೂ ನಮಗಿರುವುದಿಲ್ಲ . ಅಳು ಎಂಬ ಅಮೃತ ಸಿಂಚನಕ್ಕೆ ಒಂದು ಪುಟ್ಟ ವಂದನೆ ನಗುವಿನಿಂದಲೇ ... ಸಂಪೂರ್ಣ ಖುಷಿಯಿಂದಲೇ...

ಕಾಮೆಂಟ್‌ಗಳಿಲ್ಲ: