ಗುರುವಾರ, ಮೇ 12

ಭಾವನಾತ್ಮಕ ಸಂಬಂಧಗಳು...

ಒಂದು ವಿಷಯವನ್ನು ನಿಖರವಾಗಿ ತಿಳಿಯುವ ಮುನ್ನ ಅದರ ಬಗ್ಗೆ ಬರೆಯುವುದು ಬಹಳ ಕಷ್ಟ.ಊಹೆಗೆ ನಿಲುಕದ ಭಾವನೆಗಳ ಸಾಮ್ಯತೆಯನ್ನು ಎರಡು ಜೀವಗಳು ಸಮಾನವಾಗಿ ಹೊಂದಿ ಏರ್ಪಡಿಸಿಕೊಳ್ಳುವ ಅತ್ಯಂತ ಅಪರೂಪದ ಸಂಬಂಧಗಳು ಭಾವನಾತ್ಮಕ ಸಂಬಂಧಗಳು ಎನಿಸಿಕೊಳ್ಳುತ್ತವೆ.ಅಲ್ಲಿ ಪರಸ್ಪರ ಪ್ರೀತಿ,ಸಮರ್ಪಣಾ ಮನೋಭಾವ,ಆರಾಧನಾ ಮನೋಭಾವ ಮತ್ತು ಸ್ವಾಸ್ಥ್ಯತೆಯ ಉತ್ತುಂಗ ನಿರ್ಮಲ ಮನದ ಪೂಜ್ಯತೆಯಲ್ಲಿ ನಿರತವಾಗುತ್ತದೆ.


ಅಪ್ಪಟವಾದ ಆತ್ಮ ಬಂಧುತ್ವ ಭಾವನಾತ್ಮಕ ಸಂಬಂಧಗಳ ಜೀವಾಳ.ಎಂದೂ ಕಾಣದ ಎಷ್ಟೋ ದೂರದ ವ್ಯಕ್ತಿಗಳಲ್ಲಿ ಕೂಡ ಇಂತಹ ವಿಶೇಷ ಸಂಬಂಧ ಬೆಳೆಯುವುದು ಮಾತ್ರ ಇಲ್ಲಿ ಆಶ್ಚರ್ಯ ಹುಟ್ಟಿಸ...ಿದರೂ ಪಾರಮಾರ್ಥಿಕ ಭರವಸೆಯ ತಳಹದಿ ಮೂಲವಾಗಿರುತ್ತದೆ.ಇಲ್ಲಿ ಸಾಮಾಜಿಕವಾಗಿ ಗುರುತಿಸಲ್ಪಡುವ ಹೆಸರಿಸ ಬಹುದಾದ ಎಲ್ಲಾ ಸಂಬಂಧಗಳನ್ನು ಮೀರಿದ ಬಂಧುತ್ವ ಏರ್ಪಟ್ಟಿರುತ್ತದೆ.ಅಪ್ಪ ಅಮ್ಮ ಅಣ್ಣ ತಂಗಿ ಸ್ನೇಹಿತ ಸ್ನೇಹಿತೆ ಪ್ರಿಯತಮೆ ಪ್ರಿಯಕರ ಹೀಗೆ ಯಾವುದಕ್ಕೂ ಸೇರದ ಆದರೆ ಎಲ್ಲವನ್ನೂ ಒಟ್ಟಾರೆ ಹೊಂದಿದ ಅನುಬಂಧವೇ ಪ್ರಧಾನ್ಯತೆ ಪಡೆಯುತ್ತದೆ.ಜೀವಗಳ ಭಾವ ಸೆಳೆತ ಭಾವನೆಗಳ ಜೀವ ಸೆಳೆತ.


ಭಾವನಾತ್ಮಕ ಸಂಬಂಧಗಳಲ್ಲಿ ಎರಡು ಜೀವಗಳ ನಡುವಿನ ಆಸ್ತಿ,ಅಂತಸ್ತು,ಹುದ್ದೆ,ಉದ್ಯೋಗ,ಜನಪ್ರಿಯತೆ, ಜನಪರತೆ ಮುಖ್ಯವೆನಿಸಿಕೊಳ್ಳುವುದಿಲ್ಲ.ಜೀವಗಳ ಯಾವುದೋ ಅಗೋಚರ ವಿಶೇಷ ಇಂದ್ರಿಯಗಳ ಪರಸ್ಪರ ಸ್ಪಂದನೆ ಮತ್ತು ತುಡಿತ ಮಾತ್ರ ಬಹಳ ಎತ್ತರದಲ್ಲಿ ಅಸ್ತಿತ್ವ ಕಾಪಾಡಿಕೊಂಡಿರುತ್ತದೆ. ಅತಿಯಾದ ಅಭಿಮಾನ,ತುಂಬಾ ಸಲುಗೆ,ಚೂರೇ ಚೂರು ಮುನಿಸು,ಸಂಬಂಧವೇ ಬೇಡ ಎಂದುಕೊಂಡರೂ ಮರುಪ್ರೀತಿಯದೇ ಮೇಲುಗೈ.
ಜೀವಗಳು ಮಣ್ಣಾಗಿ ಹೋಗುವ ತನಕ ಅಥವ ವ್ಯಕ್ತಿಯ ಕಡೆಯ ಉಸಿರಿರುವ ತನಕ ಭಾವನಾತ್ಮಕ ಸಂಬಂಧಗಳು ತನ್ನದೇ ಮಜಲುಗಳ ಸಾಮಾನ್ಯ ಓಟ ಕಾದಿರಿಸಿಕೊಂಡಿರುತ್ತದೆ. ಒಂದು ಸೆಳೆತ ಒಂದು ಸನಿಹತೆ ಒಂದು ಸಂತೃಪ್ತಿ ಒಂದು ಸಂತುಷ್ಟಿ. ಇಂತಹ ಭಾವನಾತ್ಮಕ ಸಂಬಂಧಗಳು ಎಲ್ಲರಲ್ಲೂ ಇರುತ್ತದಾ? ಖಂಡಿತಾ ಇರುವುದಿಲ್ಲ.ಅನೇಕರ ಮೇಲೆ ಒಬ್ಬರಿಗೆ ಇರುತ್ತದಾ? ನಿಸ್ಸಂದೇಹವಾಗಿ ಇಲ್ಲ.ಬಹು ಅಪರೂಪದ ಇಡೀ ಜೀವಮಾನದಲ್ಲಿ ಒಂದೋ ಎರಡೋ ವ್ಯಕ್ತಿಗಳ ನಡುವೆ ಮಾತ್ರ ಇದು ಕಂಡು ಬರುತ್ತದೆ.ನಿಧಾನವಾಗಿ ಅರ್ಥವಾಗುತ್ತದೆ.ಆತ್ಮ ಸಾಕ್ಷಾತ್ಕಾರದ ಪರಿಧಿ.ಮನುಸಂಕುಲ ಪ್ರೀತಿಯ ಅಂತಃಕರಣ.ವ್ಯಾಪ್ತಿಯ ಮೀರಿದ ಪ್ರಭಾವಳಿ ಪ್ರೇರಕ ಶಕ್ತಿಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತದೆ.ಭಾವನಾತ್ಮಕ ಸಂಬಂಧಗಳಿಗೆ ಪ್ರೀತಿಯ ನಮನ.

ಕಾಮೆಂಟ್‌ಗಳಿಲ್ಲ: