ಗುರುವಾರ, ಮೇ 12

ಖಾಸಗಿ ಬದುಕಿಗೆ ವಯಸ್ಸಿನ ನಿರ್ಬಂಧ ಯಾಕೆ ?

ಆಪ್ತ ಸಮಾಲೋಚನೆಯಲ್ಲಿ ನಡು ವಯಸ್ಸಿನ ಮಹಿಳೆಯೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು . ನನಗೆ ಮದುವೆಯಾಗಿ ಇಪ್ಪತ್ತೈದು ವರ್ಷಗಳು ಆಯಿತು. ಮಕ್ಕಳು ದೊಡ್ಡವರಾಗಿದ್ದಾರೆ. ನನಗೂ ನನ್ನದೇ ಹವ್ಯಾಸ - ಅಭಿರುಚಿಗಳು ಇವೆ. ಆದರೆ ಸಂಸಾರದ ಜವಾಬ್ದಾರಿಯಿಂದ ನಾನು ಯಾವುದರಲ್ಲೂ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬರೀ ಮನೆ ಕೆಲಸ, ಅಡುಗೆ ಮಾಡಿಕೊಂಡು ಪ್ರಪಂಚದ ಜ್ಞಾನವಿಲ್ಲದೇ ಹೀಗೆ ಇದ್ದುಬಿಡುವುದು ಸರಿಯಾ ಅಥವಾ ಈಗ ನನ್ನ ಅಭಿರುಚಿಗೆ ಅನುಗುಣವಾಗಿ ನಾನು ಸಂತೋಷದಿಂದ ನನ್ನನ್ನು ತೊಡಗಿಸಿಕೊಂಡು ನಾಲ್ಕು ಗೋಡೆಗಳ ಗೃಹಿಣಿ ಎಂಬ ಸ್ಥಾನದಿಂದ ಹೊರಬರುವುದು ಸರಿಯಾ ? ನಿಜಕ್ಕೂ ಒಳ್ಳೆಯ ಪ್ರಶ್ನೆ. ಅನುಮಾನವೇ ಬೇಡ ಬದುಕು ಪ್ರತಿ ವ್ಯಕ್ತಿಗೂ ಒಂದೇ. ಅದನ್ನು ನಮ್ಮ ಮನಸ್ಸು ಬಯಸಿದ ಹಾಗೆ ಅನುಭವಿಸುವುದು ನಿಜಕ್ಕೂ ಸಮಂಜಸ. ಸುಮಾರು ವರ್ಷಗಳಿಂದ ಹಾಗೆ ಗೃಹ ಬಂಧನದಲ್ಲಿ ಇದ್ದು ಈಗ ಸ್ವಲ್ಪ ಮುಕ್ತ ಪ್ರಪಂಚ, ಸಾಮಾಜಿಕ ಸಂಬಂಧ, ಆಸಕ್ತಿ - ಅಭಿರುಚಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಪತಿ ಮತ್ತು ಮಕ್ಕಳು ಯಾವ ರೀತಿ ವರ್ತಿಸುತ್ತಾರೆ ಅನ್ನುವುದು ಅವರ ಸಹಜ ಗೊಂದಲ. ಗಂಡ ಮತ್ತು ಮಕ್ಕಳ ಜೊತೆ ಚರ್ಚಿಸಿ ಸ್ವಲ್ಪ ಅರಿವು ಮೂಡಿಸಿ ಅಭಿರುಚಿಯನ್ನು ಬೆಳೆಸುವುದು - ಬೆಳೆಯುವುದು ನಿಜಕ್ಕೂ ಸ್ವಾಗತಾರ್ಹ.
ಸಾಮಾಜಿಕ ಬದುಕಿನ ಮಜಲುಗಳು ಬದಲಾಗುತ್ತಿವೆ. ಪ್ರತಿ ವ್ಯಕ್ತಿಯೂ ಸಂತೋಷವಾಗಿ ಇರಬೇಕು. ಖಾಸಗಿ ಬದುಕು ಎನ್ನುವುದು ಎಲ್ಲರಿಗೂ ಒಂದು ವ್ಯಕ್ತಿ ಸ್ವಾತಂತ್ರ್ಯ. ಜೊತೆಗೆ ಬದುಕು ಕೂಡ ಒಂದು ರೀತಿಯ ಸತತ ಹೋರಾಟ. ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಸಂತೋಷವಾಗಿರುವುದು ಪ್ರತಿ ವ್ಯಕ್ತಿಯ ಅವಶ್ಯಕತೆ. ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅರ್ಥಪೂರ್ಣವಾದ ವ್ಯಕ್ತಿ ಸ್ವಾತಂತ್ರ್ಯದ ಖಾಸಗಿತನ ಖಂಡಿತ ತಪ್ಪಲ್ಲ. ವಯಸ್ಸಾಗುತ್ತಿದ್ದಂತೆ ಗಂಡ ಅಥವಾ ಹೆಂಡತಿ ಯಾರಾದರೂ ಒಬ್ಬರು ಸಾಯುತ್ತಾರೆ. ಸಾವು ಅನ್ನುವುದು ಸಹಜ. ಇಂತಹ ಸಂದರ್ಭದಲ್ಲಿ ವಿಚಲಿತರಾಗದೆ ನಮ್ಮ ಪಾಲಿನ ಆಯುಷ್ಯವನ್ನು ಅರ್ಥಪೂರ್ಣವಾಗಿ ಕಳೆಯುವುದು ನಿಜಕ್ಕೂ ಅತೀ ಮುಖ್ಯ. ಪ್ರೀತಿ - ಪ್ರೇಮ - ಹಚ್ಚಿಕೊಳ್ಳುವಿಕೆ - ದುಃಖ ನಿರಾಸೆ ಇವೆಲ್ಲಾ ಸಹಜವಾದರೂ ಅದು ನಿರಂತರ ಬದುಕಿನುದ್ದಕ್ಕೂ ಕೊರಗುವಂತೆ ಮಾಡಬಾರದು. ನಾವು ಈ ಭೂಮಿಗೆ ಬರುವಾಗ ಮತ್ತು ಭೂಮಿಯಿಂದ ಹೊರಡುವಾಗ ಏಕಾಂಗಿಯಾಗಿ ಇರುವುದು. ಜೀವಿತಾವಧಿಯಲ್ಲಿ ಮನೆ, ಮಕ್ಕಳು, ಗಂಡ ಅಥವಾ ಹೆಂಡತಿ ಎನ್ನುವ ವ್ಯವಸ್ಥೆ ಎಲ್ಲಾ ಸಂತೋಷವೇ ಅದರೂ ಬದುಕಿನ ಘೋರತೆಗೆ ಮಾತ್ರ ಯಾರೂ ವಿಚಲಿತರಾಗಬಾರದು . ನಮ್ಮ ಹುಟ್ಟಿಗೆ, ನಮ್ಮ ಆಯುಷ್ಯಕ್ಕೆ ತನ್ನದೇ ಆದ ದೈವ ಪ್ರೇರಣೆ ಇರುತ್ತದೆ.
ಶೇಷು ಚಿಕ್ಕಪ್ಪ ಎಂಬ ಸಂಬಂಧಿ ತಮ್ಮ ಐವತ್ತೈದು ವರ್ಷಗಳಾದ ನಂತರ ತಮ್ಮ ಮಡದಿಯನ್ನು ಕಳೆದುಕೊಂಡರು. ತಮಗಿದ್ದ ಮಗ ಮತ್ತು ಮಗಳಿಗೆ ಮದುವೆಯಾಗಿತ್ತು. ಆಮೇಲೆ ಮತ್ತೊಂದು ವಿವಾಹ ಮಾಡಿಕೊಳ್ಳುವ ಮನಸ್ಸು ಹೊಂದಿದರು. ಜನರೆಲ್ಲಾ ಯಾಕಪ್ಪ ಈ ವಯಸ್ಸಿನಲ್ಲಿ ಇನ್ನೊಂದು ಮದುವೆ ಎಂದರು. ಶೇಷು ಚಿಕ್ಕಪ್ಪ ಏಕಾಂಗಿ ತನವನ್ನು ಮೀರಲು ತಮ್ಮ ಹೃದಯದಂತೆ ತಮ್ಮ ವಯಸ್ಸಿಗೆ ಅನುಗುಣವಾದ ಹಿರಿಯ ಮಹಿಳೆಯೊಂದಿಗೆ ಮದುವೆಯಾದರು. ಈಗಲೂ ದಂಪತಿಗಳು ಸುಖವಾಗಿದ್ದಾರೆ. ಮೋಹನ್ ರಾವ್ ಎನ್ನುವ ಮತ್ತೊಬ್ಬ ಸಂಬಂಧಿಕರು ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡರು. ಮೋಹನ್ ರಾವ್ ಬಿಡುವಿನ ವೇಳೆಯಲಿ ಗಂಡು ಹೆಣ್ಣುಗಳ ಜಾತಕ ತೋರಿಸುವ ಮದುವೆಗೆ ಅನುಕೂಲವಾಗುವ ಸಮಾಜ ಸೇವೆ ಮಾಡುತ್ತಿದ್ದರು. ಅವರಿಗೆ ದುಡ್ಡಿನ ಆಸೆ ಇರಲಿಲ್ಲ. ನಿವೃತ್ತರಾದರು. ತಮ್ಮ ಮಗ ಮತ್ತು ಮಗಳಿಗೆ ಮದುಯಾಗಿತ್ತು. ಯಾವುದೋ ಏಕಾಂತ ಕಾಡಲು ಶುರುವಾಯಿತು. ಅವರ ಬಳಿಗೆ ಬಂದ ಹಿರಿಯ ಮಹಿಳೆಯ ಜಾತಕ ನೋಡಿ ತಮ್ಮನ್ನು ಮದುವೆಯಾಗಲು ಅಭ್ಯಂತರ ಇಲ್ಲವೇ ಎಂದು ಕೇಳಿ ಅವರೇ ಮದುವೆಯಾದರು. ಅವರೂ ಖುಷಿಯಾಗಿದ್ದಾರೆ. ನಮಗೆ ಬುದ್ಧಿ ಇಲ್ಲದ ಸಮಯದಲ್ಲಿ ಇವೆಲ್ಲಾ ಏನೋ ದೊಡ್ಡ ಅಪರಾಧದಂತೆ ಕಾಣಿಸುತ್ತಿತ್ತು. ನಿಜಕ್ಕೂ ಇವರೆಲ್ಲಾ ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೊಂದು ಹಿರಿಯ ಹೆಣ್ಣಿಗೆ ಆಶ್ರಯ ಎನ್ನುವ ಬಾಳು ಕೊಟ್ಟು ತಮ್ಮ ಏಕಾಂಗಿ ತನವನ್ನು ಓಡಿಸಿ ಸುಖವಾಗಿ ಇದ್ದಾರೆ.
ಜನ ಏನು ಮಾಡಿದರೂ ಒಂದು ಕೊಂಕು ನುಡಿ ಹೇಳಿಯೇ ಹೇಳುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದಿರಿ ಬಿಡಿ ಎಂದು ಅಭಿನಂದಿಸುತ್ತಾರೆ. ಜೀವನವಿಡೀ ಕೊರಗುವುದಕ್ಕಿಂತ ಪುಟ್ಟ ಪುಟ್ಟ ಸಂತೋಷಗಳಲ್ಲಿ ನಮ್ಮ ಮನಸ್ಸಿಗೆ, ನಮ್ಮ ಹೃದಯಕ್ಕೆ ಪುಟ್ಟ ಪರಿವರ್ತನೆ ಕೊಟ್ಟು ಸುಖವಾಗಿರುವುದು ನಿಜಕ್ಕೂ ಅರ್ಥಪೂರ್ಣ. ಅಂದ ಹಾಗೆ ಇಂತಹವರ ಅನುಕೂಲಕ್ಕೆ ಮತ್ತು ವಿಚ್ಚೇದಿತರಿಗೆ ಮತ್ತು ವಿಧವಾ ವಿವಾಹಗಳಿಗೆ www.parivarthan.com ಎಂಬ ತಾಣವೂ ಕೆಲಸ ಮಾಡುತ್ತಿದೆ ಎನ್ನುವುದು ಒಂದು ಪುಟ್ಟ ಮಾಹಿತಿ ಅಷ್ಟೇ.

ಕಾಮೆಂಟ್‌ಗಳಿಲ್ಲ: